ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಗೆಲ್ಲಬೇಕಾದರೆ ಉಸಿರು ನಿಲ್ಲೋವರೆಗೂ ಕೊಸರಾಡುತ್ತಿರಬೇಕು! (ಪ್ಲಸ್ ಪಾಯಿಂಟ್)

ಗೇಮೆಂದರೇನು? ಹುರುಪು, ಪ್ರಯತ್ನ, ಬೇಸರ, ಸಿಡುಕು, ಶ್ರಮ, ಸ್ಫೂರ್ತಿ, ನಿರಾಸೆ, ಗೆಲುವು, ಹತಾಶೆ, ಅವಕಾಶ, ಪ್ರತಿಫಲ, ಸಂತೋಷ, ಸೋಲು, ನಿರೀಕ್ಷೆ, ಹೊಯ್ದಾಟಗಳ ಸಮ್ಮಿಶ್ರವಲ್ಲವೆ? ಬದುಕು ಭಗವಂತನಾಡಿಸುವ ಆಟ ಅಂತ ಕೆಲವರಂದುಕೊಳ್ಳುತ್ತಾರೆ. ಯಾವುದೂ ನಮ್ಮ ಕೈಲಿಲ್ಲ. ಬದುಕಿನಲ್ಲಿ ಏನೆಲ್ಲಾ ನಡೆಯಬೇಕೋ ಅವೆಲ್ಲವೂ ಭಗವಂತ ನಿಚ್ಛೆಯಂತೆ ನಡೆಯುತ್ತೆ ಎನ್ನುತ್ತಿರುತ್ತಾರೆ. ಇನ್ನೂ ಕೆಲವರು ಹಣೆಬರಹವನ್ನು ಹಣಿಯುತ್ತಾ ಕೂತುಬಿಡುತ್ತಾರೆ. ನಮ್ಮ ಹಣೆಬರಹ ಚೆನ್ನಾಗಿರದಿದ್ದ ಮೇಲೆ ನಾವಾದರೂ ಏನು ಮಾಡೋಕ್ಕಾಗುತ್ತೆ ಅಂತ ಪೆದ್ದುಪೆದ್ದಾಗಿ ಮಾತನಾಡಿಕೊಳ್ಳುತ್ತಿರುತ್ತಾರೆ (ಚಿತ್ರಕೃಪೆ: B/R Football).

ದೇವರ ಕರುಣೆಯಿಲ್ಲ, ಹಣೆಬರಹ ಚೆನ್ನಾಗಿಲ್ಲ, ಅದೃಷ್ಟ ಒಲಿದು ಬರಲಿಲ್ಲ ಅನ್ನೋದೆಲ್ಲವೂ ನಿರಾಶೆ, ಹತಾಶೆ, ದೌರ್ಬಲ್ಯದ ಮಾತುಗಳು. ಅಸಲಿಗೆ ಬದುಕಿನ ಯಶಸ್ಸು ನಮ್ಮ ಶ್ರಮವನ್ನು ಅವಲಂಭಿಸಿದೆಯೇ ಹೊರತು; ಅದು ಯಾವ ದೇವರನ್ನೂ, ಅದೃಷ್ಟವನ್ನೂ, ಹಣೆಬರಹವನ್ನೂ ನೆಚ್ಚಿಕೊಂಡಿಲ್ಲ. ಗೆದ್ದೇ ಗೆಲ್ಲಬೇಕು ಅಂತ ನಾವು ಕೊಸರಾಟ ಶುರುವಿಟ್ಟುಕೊಂಡಿದ್ದೇ ಆದರೆ ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇವೆ. ಗೆಲುವಿನ ಹಪಹಪಿ, ಅಛಲಭಾವ, ಅಪರಿಮಿತ ನಂಬುಗೆ ನಮ್ಮನ್ನು ಗೆಲ್ಲೋವರೆಗೂ ಕಾಯುತ್ತಿರಬೇಕಷ್ಟೇ.

ಬದುಕನ್ನು ಹುಟ್ಟಿನೊಂದಿಗೆ ಆರಂಭವಾಗಿ ಸಾವಿನೊಂದಿಗೆ ಮುಗಿಯುವ ಫುಟ್ಬಾಲು ಗೇಮೆಂದು ಹೇಳಬಹುದೇನೊ. ಇಲ್ಲೂ ಕಾಲೆಳೆಯುವವರಿರುತ್ತಾರೆ, ಸಾಂತ್ವನಿಸುವವರು ಸಿಗುತ್ತಾರೆ, ತಳ್ಳಾಡಿ ಗುದ್ದಾಟಕ್ಕೆ ನಿಲ್ಲುವವರು ಎದುರಾಗುತ್ತಾರೆ, ಹುರಿದುಂಬಿಸಿ ಎದ್ದು ನಿಲ್ಲಿಸುವವರೂ ಕಾಣಿಸುತ್ತಾರೆ. ಅವರೆಲ್ಲರ ಮಧ್ಯೆ ಆಡಿಕೊಂಡೇ ನಾವು ಗೋಲು ಬಾರಿಸಬೇಕು. ಅಬ್ಬಾ ಸುಸ್ತಾಯಿತು. 'ನನ್ ಕೈಲಿ ಇನ್ನಾಗಲ್ಲಪ್ಪಾ..' ಅಂತ ಕುಂತುಬಿಟ್ಟರೆ ಮುಗಿದೇಹೋಯಿತು ಕತೆ. ನಮ್ಮ ಕಾಲಬುಡದಲ್ಲೇ ಹೊರಳಾಡುತ್ತಿದ್ದ ಬಾ(ಗೋ)ಲನ್ನು ಇನ್ಯಾರೋ ಒದ್ದು ಸಾಗುತ್ತಾರೆ. ಬಾಲನ್ನು ಗೋಲುಪೋಸ್ಟಿನೆಡೆಗೆ ತಲುಪಿಸಿ ಕೇಕೆ ಹಾಕುತ್ತಾರೆ. ನಾವು ಕುಂತಲ್ಲೇ ಹತಾಶರಾಗಿ ಮುಖಭಂಗ ಅನುಭವಿಸಬೇಕಾಗುತ್ತದೆ!

ಬದುಕಿನ ಆಟದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿ ಮೈದಾನಕ್ಕಿಳಿದಿರುತ್ತೇವೆ. ಆಟ ನಮ್ಮಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿ ಮರುಕ್ಷಣದಲ್ಲಿ ಸೋಲಿನ ಕಹಿ ನೀಡಲೂಬಹುದು. ಹಾಗೆ ನಾವು ಸೋತ ಮಾತ್ರಕೆ ನಮ್ಮಿಂದ ಗೆಲ್ಲಲಾಗೋಲ್ಲ ಎಂದರ್ಥವಲ್ಲ. ಗೆಲುವು ಇನ್ನೊಂದಿಷ್ಟು ಕಾಲಾವಕಾಶ ಕೇಳುತ್ತಿದೆಯೆಂದರ್ಥ. ಅಂದರೆ ಮುಂದಿನಸಾರಿ ನಾವು ಮೈದಾನಕ್ಕಿಯುವಾಗ ತುಂಬಾ ಎಚ್ಚರವಾಗಿ ಆಡಬೇಕು. ಆಟದ ಕೌಶಲಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು. ಹಿಂದಿನ ಆಟದಲ್ಲಿ ಎಲ್ಲಿಲ್ಲಿ ಎಡವಿದ್ದೇವೆ ಎಂಬುದನ್ನು ಮನಗಂಡು ಅಲ್ಲೆಲ್ಲಾ ತಿದ್ದಿಕೊಂಡು ಆಡಬೇಕು ಅಷ್ಟೇ; ಈ ಬಾರಿ ನಾವು ಗೆಲ್ಲೋದನ್ನು ಯಾರಿಂದಲೂ ತಪ್ಪಿಸಲಾಗೋಲ್ಲ. ಹಾಗೂ ಸೋತೆವು ಅಂದುಕೊಳ್ಳೋಣ. ನಾವು ಇನ್ನೊಂದಿಷ್ಟು ಕಲಿಯೋದಿದೆ, ತಿದ್ದಿಕೊಳ್ಳೋದಿದೆ, ಇನ್ನಷ್ಟು ಶ್ರಮ ಹಾಕಬೇಕಿದೆ ಅನ್ನೋ ಅರ್ಥವದು. ಮತ್ತೊಂದು ಬಾರಿ ಮೈದಾನಕ್ಕಿಳಿದಾಗ ಇವೆಲ್ಲವನ್ನೂ ಪಾಲಿಸಿದರಾಯ್ತು. ಆಗ ಗೆಲುವು ನಮ್ಮದೇ ಅಲ್ಲವೆ?

ಬದುಕು ಬರೀ ಅದೃಷ್ಟವನ್ನು ನಂಬಿಕೊಂಡ ಆಟವಲ್ಲ. ಕ್ಷಣ ಮಾತ್ರದಲ್ಲಿ ಆಗಿಹೋಗಬಲ್ಲ ಪವಾಡವೂ ಅಲ್ಲ. ಬದುಕೆಂದರೆ ಅದು ನಿರಂತರ ಹೋರಾಟ, ಅವಿರತ ಶ್ರಮ, ತಾಳ್ಮೆ, ನಂಬಿಕೆ, ಪ್ರೀತಿ, ಏಳು-ಬೀಳು, ವಿಶ್ವಾಸ, ನಲಿವು ಇತ್ಯಾದಿಗಳೊಂದಿಗೆ ಮುಂದರಿಯುವ ರೋಚಕ ಪಂದ್ಯ. ಇಲ್ಲಿ ಪಂದ್ಯ ಗೆಲ್ಲಬೇಕಾದರೆ ಉಸಿರು ನಿಲ್ಲವವರೆಗೂ ಕೊಸರಾಡುತ್ತಿರಬೇಕು. ಎದ್ದೂಬಿದ್ದೂ ಗೋಲನ್ನು ಗುರಿಯೆಡೆಗೆ ಹೊಡೆಯುತ್ತಿರಲೇಬೇಕು!

-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು