ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

'ವೈಟ್ ಕೋಟ್' ಅಂದಾಗ ಮೂಗುಮುರಿಯ ಬೇಡವೆ, ಆ ಮುದ್ದು ಮೂಗುತಿ ಮುನಿಸೀತು.. (ಒ'ಲವ್'ವಿನ ಓಲೆ)

ಸೈನ್ಸ್ ಹುಡುಗಿ,
'ವೈಟ್‌ಕೋಟ್' ಅಂತ ಕರೆದಾಗೆಲ್ಲಾ ಆ ಮೂತಿಯನ್ನೇಕೆ ಹನುಮಂತನ ಹಾಗೆ ಊದಿಸಿಕೊಳ್ತೀಯೋ. ಪುಟಾಣಿ ಮೂಗುತಿ ಕೂತಿರುವ ಆ ಮುದ್ದು ಮೂತಿಯನ್ನ ಮುರಿದು ದಂಡಿಸುವುದರ ಮರ್ಮವೇನೆ?. ನಗುತ್ತ ಮಾತನಾಡುತ್ತಿದ್ದೋಳು ಆ ಹೆಸರೆತ್ತಿದ ಕೂಡಲೇ ಭದ್ರಕಾಳಿಯ ಹಾಗೆ ಬದಲಾಗಿ ಸಪೂರ ದೇಹವನ್ನೊಮ್ಮೆ ಝಾಡಿಸಿ ಸರಸರನೆ ಸರಿದು ಹೋಗುತ್ತೀಯಲ್ಲ?, ಆ ಸಿಡುಕಿನಲ್ಲಿ ನಿನ್ನ ವಾಕಿಂಗ್ ಸ್ಟೈಲೇ ಬದಲಾಗಿ ಬಳುಕುವ ನಿನ್ನ ಸೊಂಟಕ್ಕೆ ಅಂದ ಮೆತ್ತಿಕೊಳ್ಳುತ್ತೆ. ನನಗಿನ್ನೇನು ಕೆಲಸ ಅಂತೀ? ಹೊತ್ತು ಕಳೆಯದೆ ಸರಕ್ಕನೆ ದುಂಬಿಯಾಗಿಬಿಡುತ್ತೇನೆ. ಅಂದದ ಹೂವಿನ ಮೇಲೇರಿ ಮಕರಂದ ಹೀರುತ್ತಾ ಜೀಕುವ ಹನಿ ಬೀಯ ಹಾಗೆ ನಿನ್ನ ನಡುವಿನ ಸೊಬಗಿನಲ್ಲೇ ಕಳೆದುಬಿಡುತ್ತೇನೆ.

ಸೈಕಾಲಜಿ ಪೀರಿಯಡ್ ಆರಂಭವಾಗುತ್ತಲೇ ಬೆಲ್ಲ ತೂಗಲಿಕ್ಕೆ ಶುರುವಿಡುತ್ತಿದ್ದ ನನ್ ಮಹಾನ್ ಪರಾಕ್ರಮ ಕೇಳಿ ತಲೆಗೆ ನಾಲ್ಕು ಮೊಟಕು ಹಾಕಿ ಗೇಲಿ ಮಾಡುವಷ್ಟು ಸಲುಗೆ ಹೊಂದಿದ್ದೋಳು ಇತ್ತೀಚೆಗೆ ಪಾತರಗಿತ್ತಿಯ ಹಾಗೆ ರೂಪಾಂತರಗೊಂಡುಬಿಟ್ಟೆಯಲ್ಲೆ? ನೀನು ಕಾರಿಡಾರ್‌ನಲ್ಲಿ ಅಡ್ಡಾಡುವಾಗೆಲ್ಲಾ ನನ್ನತ್ತ ನೋಡೀಯ ಅನ್ನೋ ಆಸೇಲಿ ಗ್ರೌಂಡ್ ಫ್ಲೋರ್‌ನಿಂದ ನೀನಿರೋ ಸೆಕೆಂಡ್‌ ಫ್ಲೋರ್‌ಗೆ ಇಣುಕೀ ಇಣುಕಿ ನನ್ನ ಕತ್ತಿನ್ನೇನು ಜಿರಾಫೆಯ ಕತ್ತಾಗುವುದರಲ್ಲಿದೆ. ನೀನು ಮಾತ್ರ ಇನ್ನೂ ವೈವ, ಅಸೈನ್ಮೆಂಟ್ಸು, ಪ್ರ್ಯಾಕ್ಟಿಕಲ್ಸ್ ಅಂತೆಲ್ಲಾ ನಿತ್ಯೋದ್ಯೋಗಿಯ ಹಾಗೆ ಸೈನ್ಸು ಲೋಕದಲ್ಲೇ ರೌಂಡು ಹೊಡೆಯುತ್ತಿದ್ದೀಯಲ್ಲ, ನನ್ನ ಕಣ್ಣ ಕರೆಯೋಲೆ ನಿನ್ನುನ್ನು ತಲುಪುವುದ್ಯಾವಾಗ? ನಿನ್ನ ಒಪ್ಪಿಗೆಯ ನಸು ನಗುವಿಗೆ ಕೇಕೆ ಹಾಕಿ ನಾನು ಸತ್ತುಹೋಗುಷ್ಟು ಸಂಭ್ರಮಿಸುವುದ್ಯಾವಾಗ?

ನೀನು ಬ್ಯುಸಿಯೆಂಬ ನಿತ್ಯ ಪೂಜೆಯಲ್ಲಿರುವುದನ್ನ ನೋಡುವಾಗೆಲ್ಲಾ ಸಿಟ್ಟು ಬಂದುಬಿಡುತ್ತೆ. 'ಅಬ್ಬಾ ಇದೇನು ಹುಡುಗಿಯೊ. ಸೈನ್ಸಿಗೆ ಹುಟ್ಟಿದೋಳ ಹಾಗೆ ಆಡ್ತಾಳೆ' ಅಂತ ಕಂಟ್ರೋಲು ತಪ್ಪಿ ಮನಸ್ಸಿನೊಳಗೊಂದು ಸಿಡುಕಿನ ಮಾತು ಬಂದು ಹೋಗೋದೂ ಇದೆ. ಆದ್ರೆ ಮರುಕ್ಷಣವೇ ತಣ್ಣಗಾಗಿಬಿಡುತ್ತೇನೆ. ನಿಜ ಹೇಳಲಾ ಪಿಸಿಎಂಬಿ? ಒಂದು ಕ್ಷಣ ರೇಗಿಹೋದರೂ ಮತ್ತೆ ಮನ್ಸು ಕೂಲಾದಾಗ ನಿನ್ನ ಅವಸರವನ್ನು ಕಂಡು ಒಳಗೇ ನಗುತ್ತೇನೆ. ಅಷ್ಟು ಸಣಕಲು ದೇಹದ ನೀನು ಸೈನ್ಸ್‌ ಲೋಕದ ಟೆನ್ಶನ್ನಿನಿಂದಾಗಿ ಕೊಸರಾಡಿಕೊಂಡು ಸರಸರನೆ ಓಡಾಡುತ್ತಿರೋದನ್ನು ನೋಡೋದಕ್ಕೆ ಎಂಥಾ ಮಜಾ ಅನ್ನಿಸುತ್ತೆ ಗೊತ್ತಾ? ಅಸಲಿಗೆ ನೀನು ಬ್ಯುಸಿಯಲ್ಲಿರೋದನ್ನು ನೋಡುವಾಗಲೇ ನನ್ನ ಕನಸಿಗೆ ಜೀವಬರೋದು. ಆಸೆಯ ಬೀಜ ಊಟೆಯೊಡೆದು ಬೇರು ಹುದುಗಿಸೋಕೆ ಎದೆಯ ಗೂಡಲ್ಲಿ ಜಾಗ ಕೊರೆಯುವಹಾಗೊಂದು ಪುಳಕದ ಮಿಂಚು ಬೆಳಗೋದು. ನೀನು ಚೆನ್ನಾಗಿ ಓದಬೇಕು, ನಾಳೆ ಡಾಕ್ಟರ್ ಅಂತ ಕರೆಸಿಕೊಳ್ಳಬೇಕು, ಬಡ ಅವ್ವಂದಿರು ಅತ್ತುಕೊಂಡು ಎತ್ತಿಕೊಂಡು ಬರುವ ಹಸುಗೂಸುಗಳಿಗೆಲ್ಲಾ ಅಕ್ಕರೆಯ ಟ್ರೀಟ್ಮೆಂಟ್ ನೀಡಬೇಕು, ಬಡವರಿಗೆಲ್ಲಾ ನೆರವಾಗಬೇಕು, ಕಣ್ಣಿಲ್ಲದವರಲ್ಲೂ ಕನಸುಗಳನ್ನು ಬಿತ್ತಬೇಕು, ಬಡವರೆಲ್ಲರಲ್ಲಿ 'ಈ ಡಾಕ್ಟರು ನಿಜವಾದ ದೇವರು' ಅಂತ ನೀನು ಹಾರೈಸಿಕೊಂಡಾಗ ನಿನ್ನೊಂದಿಗೆ ನಾನೂ ಲೆಕ್ಕವಿಲ್ಲದಷ್ಟುಸಾರಿ ಖುಷಿಯಲ್ಲಿ ಕಣ್ಣು ತೋಯಿಸಿಕೊಳ್ಳಬೇಕು ಎಂದೆಲ್ಲಾ ನನ್ನೊಳಗೆ ಸಾಲು ಸಾಲು ಕನಸುಗಳಿವೆ. ಆ ಮನದ ಬಸಿರಿನ ಒಳಗಿರುವ ಕನಸುಗಳಿಗೆಲ್ಲಾ ನೀನು ಚೈತನ್ಯವಾಗಬೇಕು. ಮತ್ತೆ ಕನಸುಗಳನ್ನು ಒಂದೊಂದಾಗಿ ಹೆರಬೇಕು. ಹೆತ್ತ ಆ ಕನಸಿನ ಕೂಸುಗಳಿಗೆಲ್ಲಾ ನಾವಿಬ್ಬರೂ ಸೇರಿ ನನಸು-1, ನನಸು-2, ನನಸು-3.... ಹೀಗೆ ಸಾಲಾಗಿ ಹೆಸರಿಡುತ್ತಾ ಬರಬೇಕೆಂದುಕೊಂಡಿದ್ದೇನೆ. ಈ ಆಸೆ ನೆರವೇರಿಸಿಕೊಡುತ್ತೀಯ ಪ್ಲೀಸ್.

ಅಚ್ಚರಿಯಾದೀತು ನಿಂಗೆ. ಪ್ರೇಮ ನಿವೇದನೆಯಾಗಿಲ್ಲ. ನಾವಿಬ್ರೂ ಪಾರ್ಕಿನ ಕಲ್ಲು ಬೆಂಚಿನಲ್ಲಿ ಕೂತು ಅಂಡು ಸವೆಸಿಕೊಂಡಿಲ್ಲ. ಕಾರಿಡಾರಿನಲ್ಲಿ ನೆಲದಿಟ್ಟಿಸುತ್ತ ಸ್ಲೋವಾಕ್ ಮಾಡಿದ್ದಿಲ್ಲ. ವಾಟ್ಸಾಪಿನಲ್ಲಿ ಚಾಟ್ ಮಾಡ್ತಾ ನಡುರಾತ್ರೀಲಿ ಸದ್ದಾಗದೆ ನಕ್ಕಿದ್ದು ಇಲ್ಲವೇ ಇಲ್ಲ. ಇವೆಲ್ಲದಕ್ಕೂ ಮೊದಲೇ ಡಾಕ್ಟರಾಗು ಅಂತ ತಲೆತಿನ್ನುತ್ತಿದ್ದಾನಲ್ಲ. ಹೆರುವ ಮಾತನಾಡುತ್ತಿದ್ದಾನಲ್ಲ. ಇವನಿಗೆಲ್ಲೋ ಹುಚ್ಚಿರಬೇಕು ಅಂತ ಕಣ್ಣರಳಿಸಿ ಮನಸ್ಸಿನಲ್ಲಿ ಹೇಳಿಕೊಂಡೀಯ. ನಾವು ಹುಡುಗರೇ ಹಾಗೆ. ಮನಸ್ಸು ಮಗುವಾಗಿ ರಚ್ಚೆ ಹಿಡಿಯೋದೇ ತಡ; ಹುಡುಗಿ ಒಪ್ಪಲಿ, ಬಿಡಲಿ. ಕೈ ಕೈ ಹಿಡಿದು ನಮ್ ಪುಟ್ಟ ಪಾಪೂನ ಎಲ್‌ಕೆಜಿಗೆ ಕರಕ್ಕೊಂಡು ಹೋಗೋ ಕನಸಿಗೆ ಆಗಲೇ ಲಗ್ಗೆ ಇಟ್ಟಿರುತ್ತೇವೆ. ನಿಂಗೊತ್ತ? ಲವ್ವೆಂಬ ಸ್ವೀಟ್ ಕಮಿಟ್ಮೆಂಟನ್ನ ಶಿರಸಾವಹಿಸಿ ಪಾಲಿಸೋದ್ರಲ್ಲಿ ನಾವು ಹುಡುಗರೇ ಮೇಲು. ಇದೆಲ್ಲಾ ನಿನ್ ವಿಜ್ಞಾನ ಮಂಡೆಗೆ ಎಲ್ಲಿ ಅರ್ಥವಾದೀತು ಹೇಳು. ಆ ತಲೇಲಿ ಮೋಲಿಕೂಲ್ಸ್, ಆ್ಯಂಟಿ ಬಯೋಟಿಕ್ಸ್, ಚಿಟಿನ್, ಆಸರ್ೆನಿಕ್, ಗ್ಲುಕ್ಯಾರಿಕ್, ಮೆಲ್ಟಿಂಗ್ ಪಾಂಯಿಂಟ್ ಆಫ್ ಸಿಲಿಕಾನ್ ಇತ್ಯಾದಿ ವಿಚಾರಗಳು ಬಿಟ್ಟರೆ ಬೇರೇನದರೂ ಇರೋದಕ್ಕೆ ಸಾಧ್ಯಾನ ಅನ್ನೋದೇ ಗುಮಾನಿ ನಂಗೆ. ಗಾಜಿನ ಟ್ಯೂಬ್‌ಗಳಲ್ಲಿ ಲಿಕ್ವಿಡ್‌ಗಳನ್ನು ಎತ್ತಿಕೊಂಡು ಒಂದಕ್ಕೊಂದು ಸೇರಿಸುವಾಗ ಆ ಮಿಲನಮಹೋತ್ಸವದಲ್ಲಿ ಜನಿಸಿದ ಹೊಸ ರಾಸಾಯನಿಕದ ಕಿಲ ಕಿಲ ನಗುವಿಗೆ ಹೊರತಾಗಿಯೂ ಬೇರೆ ವಿಚಾರಗಳು ನಿನ್ನ ತಲೆಗೆ ಹೊಕ್ಕುವುದೇ ಹೌದಾದರೆ ನಾನು ಧನ್ಯ. ಅದರಲ್ಲೂ ಭಾವನೆಗಳ ಮೆಲುದನಿ ನಿನ್ನೆದೆಗೆ ಇಳಿಯುವ ಹುಮ್ಮಸ್ಸು ಮಾಡಿದ್ದೇ ಆದರೆ ಕೂಸನ್ನ ನಾವಿಬ್ರೂ ಕೈ ಕೈ ಹಿಡಿದು ಕರೆದೊಯ್ಯುವ ನನ್ನ ಕನಸು ಖಂಡಿತಾ ಎದ್ದು ಕೂರುತ್ತೆ. 


ನಂಗೊತ್ತು ಕಣೆ. ನೀನು ಸಿಇಟಿ ಬರೆಯೋದು, ಮೆಡಿಕಲ್ ಕಾಲೇಜು ಸೇರೋದು. ಎಂಬಿಬಿಎಸ್ ಮುಗಿಸೋದು, ನಾಳೆ ಡಾಕ್ಟರ್ ಅಂತ ಕರೆಸಿಕೊಳ್ಳೋದು ಸುಲಭ ಅಲ್ಲವೇ ಅಲ್ಲ. ಅದೊಂದು ತಪಸ್ಸು. ಅದಮ್ಯ ಛಲ, ಶತಶ್ರಮ ಬೇಕೇ ಬೇಕು ಅದಕ್ಕೆ. ಹಾಗಂತ ಸಾಧ್ಯವೇ ಇಲ್ಲವೆಂದೇನೂ ಇಲ್ಲವಲ್ಲ. 'ಐ' ಸಿನಿಮಾದಲ್ಲಿನ ಡಾ. ವಾಸುದೇವನ್ನ ಹಾಗೆ ನೀಚ ಬುದ್ಧಿಯ, ಅರ್ಥಪಿಶಾಚಿ ಡಾಕ್ಟರ್ ಆಗಬೇಡ. ನ್ಯಾಯದ ಮಗ್ಗುಲಲ್ಲಿ ನಿಂತು ಬಡವರ ಕಣ್ಣೊರೆಸುವ, ನಿಸ್ವಾರ್ಥ ಸೇವೆಗೈಯುವ ನೈಜ ಡಾಕ್ಟರಾಗಬೇಕು ನೀನು. ಕನಿಕರವೇ ತೋರದೆ ಹಣವಸೂಲಿ ಮಾಡುವ ವೈಟ್‌ಕೋಟಿನವರೆಲ್ಲರ ಕಣ್ಣು ಕುಕ್ಕಬೇಕು. ಬಡವರ ಬಳಲಿದ ಎದೆಗೂಡಿಗೆ ಸ್ಟೆತಾಸ್ಕೋಪ್ ಇಟ್ಟು ಪ್ರೀತಿಯಿಂದ ಟ್ರೀಟ್‌ಮಾಡೋ ದೇವತೆಯಾಗಬೇಕು ನೀನು. ನೀನು ಡಾಕ್ಟರಾಗಲೇ ಬೇಕು ಹುಡುಗಿ. ಈ ನಿಷ್ಟರುಣ, ದುಬಾರಿ ವೈದ್ಯಕೀಯ ಕ್ಷೇತ್ರಕ್ಕೆ ನಿನ್ನಂತ ಕರುಣಾ ಡಾಕ್ಟರ್ಗಳ ಅಗತ್ಯ ತುಂಬಾ ಇದೆ. ನಿಂಗೆ ಇಷ್ಟವಿಲ್ಲದಿದ್ರೂ ಸೈನ್ಸಿಗೆ ಸೇರೂಂತ ನಿನ್ ಅಮ್ಮ ಒತ್ತಾಯಿಸಿದ್ದೂ ಇದೇ ಕಾರಣಕ್ಕಿರಲೂಬಹುದು. ದೇಶದ ತುಂಬೆಲ್ಲಾ ಇರುವ ಬಡವರ ಕಣ್ಣೀರನ್ನೊಮ್ಮೆ ನೆನೆದುಕೊಂಡುಬಿಡು ಸಾಕು. ವೈಟ್‌ಕೋಟಿನ ಕನಸು ನಿನ್ನಲ್ಲೇ ಚಿಗುರೀತು. ಆ ಕನಸೇ ನಿನಗೆ ಧೈರ್ಯ ಹೇಳೀತು. ಮುಂದೆಳೆದೊಯ್ದೀತು. ಜೊತೆಗೆ ನಾನೂ ಇದ್ದೇನೆ ಅನ್ನು; ಆಗಾಗ ವೈಟ್‌ಕೋಟ್ ಅಂತ ಕಾಲು ಎಳೆಯಲಿಕ್ಕೆ!

ಛೆ, ನಿನ್ನೊಂದಿಗೆ ನಾನೂ ಡಾಕ್ಟ್ರಾಗ್ಬೇಕಿತ್ತು. ನಂಗೆ ಡಾಕ್ಟ್ರಾಗುವ ಆಸೆಯೂ ಇತ್ತು. ದೈನಂದಿನ ಬದುಕಿನ ಎಲ್ಲೆಡೆಯೂ ಹಬ್ಬಿರುವ ಗೋಚರ-ಅಗೋಚರ ಶಕ್ತಿ ಸೈನ್ಸ್ ಅಂದ್ರೆ ನಂಗೂ ಬಲು ಇಷ್ಟಾನೆ. ಆದ್ರೆ ಅಷ್ಟಷ್ಟು ದೊಡ್ಡ ಸೈನ್ಸು ಬುಕ್ಕಿನಲ್ಲಿನ ಮಾರುದ್ದದ ಡೆಫಿನಿಶನ್ಸ್, ಡ್ರಾಯಿಂಗ್ಸ್, ಫಾರ್ಮೂಲಾಸ್ ಹೀಗೆ ಯಾವ ವಿಚಾರವೂ ನನ್ನೀ ಪೆದ್ದು ತಲೆಗೆ ಹತ್ತುವುದು ಸಾಧ್ಯವೇ ಇರ್ಲಿಲ್ಲ ನೋಡು. ಅದಕ್ಕೇ ಹೆದರಿ ಪಿಯುಸೀಲಿ ಆರ್ಟ್ಸ್ ಆರಿಸಿದೆ. ನಿನ್ನೆದುರು ಒಂಚೂರು ಬಿಲ್ಡಪ್ ಕೊಡಬೇಕೆನ್ನುವ ಇಂಗಿತದಿಂದಲೇ ಸೈಕಾಲಜಿ ಅನ್ನೋ ಸೈನ್ಸ್ ಕಾಂಬಿನೇಶನ್ ಹೆಕ್ಕಿದೆ. ಈಗ ಪಾಸಾಗೋಕೆ ಹರ ಸಾಹಸವೂ ಪಡುತ್ತಿದ್ದೇನೆ ಅನ್ನು. ಆದ್ರೆ ಡಾಕ್ಟ್ರಾಗುವ ನನ್ ಕನಸು ಇವತ್ತಿಗೂ ಜೀವಂತ ಕಣೆ. ಆ ಕನಸಿಗೆ ನೀನು ಕಣ್ಣಾಗಬೇಕು. ಕನಸುಗಳನ್ನು ಹೆರುವ ಮೂಲಕ ನನ್ನೊಂದಿಗೆ ಕೈ ಬೆಸೆಯಬೇಕು. ನೀನು ಡಾಕ್ಟ್ರಾಗ್ಲೇಬೇಕು. ಪ್ಲೀಸ್.

ಇನ್ಯಾವತ್ತೂ ವೈಟ್‌ಕೋಟ್‌ ಅಂದಾಗ ಮೂಗು ಮುರಿಯಬಾರದು. ಹಿಗ್ಗಿ ಬಿರಿಯಬೇಕು ನೀನು. ಆ ನಿನ್ನ ಅಂದಕ್ಕೆ, ವಯ್ಯಾರಕ್ಕೆ ನಾಚಿ ಆ ಮುದ್ದು ಮೂಗುತಿಬೊಟ್ಟು ಕೆಂಪೇರಬೇಕು..

ಪ್ರೀತಿಯಿಂದ ಆರ್ಟ್ಸ್‌ ಹುಡುಗ.

-ಸದಾ. ಸಕಲೇಶಪುರ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು