ಅನ್ಯಗ್ರಹ ಜೀವಿಗಳ ಬಗೆಗಿನ ಗುಸು ಗುಸು ಇವತ್ತು ನೆನ್ನೆಯದಲ್ಲ; ಅದಕ್ಕೆ ದೀರ್ಘ ಇತಿಹಾಸವಿದೆ. ಬಹಳ ಕಾಲದಿಂದಲೂ ಈ ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳೆಂಬ ವಿಚಿತ್ರ ಆಕೃತಿಗಳು, ಕಲ್ಪನೆಗಳು ಕುತೂಗಲಿಗರ ನಿದ್ದೆಗೆಡಿಸುತ್ತಲೇ ಬಂದಿವೆ. ಅವತ್ತಿನಿಂದಲೂ ಈ ಏಲಿಯನ್ಸ್ ಎಂಬ ವಿಭಿನ್ನ ಜೀವಿಗಳ ಬಗೆಗಿನ ಹುಡುಕಾಟದ ಹುಚ್ಚಿಗೆ ಮರುಳು ಸಾಹಸಿಗರು ಇಳಿಯುವಂತೆ ಮಾಡಿವೆ. ಕಲಾಂರಂತ ಬೆಸ್ಟ್ ಟೀಚರೊಬ್ಬರು, 'ಏಲಿಯನ್‌ಗಳನ್ನು ಯಾರ್ಯಾರಿಗೆ ನೋಡಬೇಕು ಅನ್ನಿಸುತ್ತದೆ, ಎಲ್ಲಿ ಕೈ ಎತ್ತಿ ನೋಡೋಣ' ಅಂದುಬಿಟ್ಟರೆ; ನನ್ನನ್ನೂ ಸೇರಿಸಿ ಅದೆಷ್ಟು ಸಾವಿರಾರು, ಲಕ್ಷಗಟ್ಟಲೆ ಕೈಗಳು ಮೇಲೆ ಹೋಗುತ್ತವೆಯೋ ಏನೋ. ಅಷ್ಟರ ಮಟ್ಟಿಗೆ ಇಂದು ಈ ಏಲಿಯನ್ಸ್ ಸಂಗತಿಗಳು ಕುತೂಹಲಗಳನ್ನು ಹುಟ್ಟುಹಾಕಿವೆ.
ಅಸಲಿಗೆ ಅನ್ಯಗ್ರಹ ಜೀವಿಗಳು ಹೇಗಿರಬಹುದು? ಎಲ್ಲಿರಬಹುದು? ಭೂಮಿಯ ಮೇಲೆ ಅಲ್ಲಿಲ್ಲಿ ಅನ್ಯಗ್ರಹ ಜೀವಿಗಳನ್ನು ಕಂಡೆವೆಂಬ ಭೀತಿಯ ಸಂಗತಿಗಳೇಕೆ ಆಗಾಗ ಕೇಳಿಬರುತ್ತಿವೆ? ಅಷ್ಟಕ್ಕೂ ಅನ್ಯಗ್ರಹ ಜೀವಿಗಳು ಭೂಮಿಗೇಕೆ ಬರುತ್ತಿದ್ದಾರೆ? ಅವರಿಗೆ ಇಲ್ಲೇನು ಕೆಲಸ?! ಎಂಬಿತ್ಯಾದಿ ನೂರು ಅಚ್ಚರಿಯ ಪ್ರಶ್ನೆಗಳು ವಿಜ್ಞಾನಿಗಳನ್ನು ಕೆಣಕಿವೆ, ಖಗೋಳ-ಪುರಾತತ್ವ ಶಾಸ್ತ್ರಜ್ಞರು ತಲೆಕೆರೆದುಕೊಳ್ಳುವಂತೆ ಮಾಡಿವೆ. ಇದರಬೆನ್ನಿಗೆ ಹಿಂದೊಮ್ಮೆ ತಂತ್ರಜ್ಞಾನ ಲೋಕದ ಅಧಿಪತಿ-ರಷ್ಯಾದ ಉದ್ಯಮಿ ಯೂರಿ ಮಿಲ್ನೆರ್ ಎಂಬಾತ ಅನ್ಯಗ್ರಹ ಜೀವಿಗಳನ್ನು ಹುಡುಕುವ ಸಲುವಾಗಿ ಕೋಟಿ ಕೋಟಿ ಹಣವನ್ನು ಸುರಿದಿದ್ದಾನೆ! ಹಾಗಾದರೆ ಏಲಿಯನ್ಸ್‌ಗಳೆಂಬ ಅಚ್ಚರಿಯ ಮೂಟೆಯೊಳಗೆ, ಲೋಕದೊಳಗೆ ಏನಿರಬಹುದು?!
ಫ್ಲೈಯಿಂಗ್ ಸಾಸರ್ ಅಥವಾ ಹಾರುವ ತಟ್ಟೆಯ ಬಗ್ಗೆ ನಿಗೂಢ ಕತೆಗಳಲ್ಲಿ, ಸಿಮಿಮಾಗಳಲ್ಲಿ ಕೇಳಿರುತ್ತೇವೆ, ನೋಡಿರುತ್ತೇವೆ. ಸಾಕಷ್ಟು ಬಾರಿ ಹಾರುವ ತಟ್ಟೆಗಳ ಕುರಿತಾಗಿ ಲೇಖನಗಳು ಬಂದಿದ್ದಿವೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ವರದಿಯಾಗಿದ್ದೂ ಇದೆ. ನಮ್ಮಲ್ಲಿ ಪ್ರಯಾಣಕ್ಕಾಗಿ ಬಸ್ಸು, ರೈಲು, ಹೆಲಿಕ್ಯಾಪ್ಟರ್, ವಿಮಾನಗಳನ್ನು ಬಳಸುವುದಿಲ್ಲವೆ? ಹಾಗೆ ಅನ್ಯಗ್ರಹ ಜೀವಿಗಳು ಸಂಚಾರಕ್ಕಾಗಿ ಫ್ಲೈಯಿಂಗ್ ಸಾಸರ್‌ಗಳನ್ನು ಬಳಸುತ್ತವೆಯೆಂಬ ವದಂತಿಯಿದೆ. ಒಂದುವೇಳೆ ಈ ಏಲಿಯನ್‌ಗಳೆಂಬ ವಿಚಿತ್ರ ಅನ್ಯಗ್ರಹ ಜೀವಿಗಳು ಇರುವುದು ನಿಜವೇ ಆದರೆ, ಫ್ಲೈಯಿಂಗ್ ಸಾಸರ್‌ಗಳು ಇರಲೂಬಹುದು. ಈ ಕುರಿತು ಈಗಲೂ ಸಂಶೋಧನೆಗಳು ನಡೆಯುತ್ತಿವೆ. ಹಾರುವ ತಟ್ಟೆಗಳ ಜಾಡುಹಿಡಿದು ಅನ್ಯಗ್ರಹ ಜೀವಿಗಳ ಬಗೆಗಿನ ಸತ್ಯಾಸತ್ಯತೆಗಳ ಅನ್ವೇಷಣೆ ವಿಜ್ಞಾನಿಗಳ ತಂಡದಿಂದ ನಡೆಯುತ್ತಲೇ ಇವೆ!
ಗುಹೆಯೊಂದರಲ್ಲಿದೆ ಏಲಿಯನ್‌ಗಳ ನಿಗೂಢ ಚಿತ್ರ!
ದೂರದರ್ಶದಲ್ಲಿ ಸ್ಟಾರ್ ಮೂವೀಸ್, ಎಚ್‌ಬಿಒ, ಮೂವೀಸ್ ನವ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಏಲಿಯನ್ಸ್ ಕುರಿತಾದ ಏಲಿಯನ್ಸ್ ವರ್ಸಸ್ ಪ್ರೆಡಿಯೇಟರ್, ಇಂಡಿಪೆಂಡೆನ್ಸ್ ಡೇ, ಏಲಿಯನ್ ಮುಂತಾದ ಇಂಗ್ಲೀಷ್ ಸಿನಿಮಾಗಳನ್ನು ನೀವು ಗಮನಿಸಿರಬಹುದು. ಆ ಸಿನಿಮಾಗಳಲ್ಲಿ ಏಲಿಯನ್‌ಗಳ ಕಾಲ್ಪನಿಕ ರೂಪ ಕಾಣಿಸುತ್ತದಲ್ಲ? ಅಂಥ ರೂಪವನ್ನೇ ಹೋಲುವ ಚಿತ್ರಗಳು ಛತ್ತೀಸ್‌ಢದ ಗುಹೆಯೊಂದರಲ್ಲಿ ಕಂಡುಬಂದಿವೆ! ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯ ಚರಾಮಾದಲ್ಲಿನ ಒಂದು ಗುಹೆಯಲ್ಲಿ 10,000 ವರ್ಷಗಳ ಹಿಂದಿನ ಏಲಿಯನ್ಸ್ ಮತ್ತು ಯುಎಫ್ಓ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಚಿತ್ರಗಳನ್ನು ಕಂಡವರಿದ್ದಾರೆ. ಛತ್ತಿಸಗಢದ ರಾಜಧಾನಿ ರಾಯಪುರ ಜಿಲ್ಲೆಯಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಚಂದೇಲಿ ಮತ್ತು ಗೋತಠೋಲಾ ಹಳ್ಳಿಯಲ್ಲಿರುವ ಈ ಗುಹೆಗಳಲ್ಲಿ ಇಂತಹ ರಾಕ್(ಕಲ್ಲಿನ) ಚಿತ್ರಗಳು ಕಾಣಿಸಿವೆ. ಪುರಾತತ್ವ ಶಾಸ್ತ್ರಜ್ಞ ಜೆ. ಆರ್ ಭಗತ್ ಅವರು, 'ಚಲನಚಿತ್ರಗಳಲ್ಲಿ ಏಲಿಯನ್ಸ್ ಮತ್ತು ಯುಎಫ್ಒ ಗಳನ್ನು ತೋರಿಸುವಂತೆ ಇಲ್ಲಿಯೂ ಚಿತ್ರಿಸಲಾಗಿದೆ' ಎಂದು ಪ್ರತಿಕ್ರಿಯಿದ್ದಾರೆ.
ಈ ಚಿತ್ರಗಳನ್ನು ನೋಡಿದರೆ ಪುರಾತನ ಕಾಲದಲ್ಲೇ ಮನುಷ್ಯ ಅನ್ಯ ಗ್ರಹದ ಜೀವಿಗಳನ್ನು ನೋಡಿದ್ದಾನೋ ಅಥವಾ ತನ್ನ ಕಲ್ಪನಾ ಶಕ್ತಿಯಿಂದಲೇ ಇಂತಹ ಚಿತ್ರಗಳನ್ನು ರಚಿಸಿದ್ದಾನೋ ಎಂಬ ಶಂಕೆ ಮೂಡುತ್ತದೆ.
'ಗೋಲಾಕಾರದ ಹಾರುವ ತಟ್ಟೆಯ ಮೇಲೆ ಕುಳಿತು ಯಾರೋ ಬರುತ್ತಿದ್ದರು. ಊರಿನ ಒಂದೆರಡು ಮಂದಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದವರು ಯಾರೂ ತಿರುಗಿ ಬರಲಿಲ್ಲ' ಎಂದು ಪೂರ್ವಜರು ತಮಗೆ ಹೇಳುತ್ತಿದ್ದ ಕಥೆಯನ್ನು ಚರಾಮಾದ ಈಗಿನ ಜನ ಹೇಳುತ್ತಾರೆ ಎನ್ನಲಾಗಿದೆ.
ಪುರಾತತ್ವ ಶಾಸ್ತ್ರಜ್ಞ ಭಗತ್ ಈ ಕುರಿತಂತೆ, 'ಗುಹೆಯಲ್ಲಿನ ಚಿತ್ರಗಳನ್ನು ಪ್ರಾಕೃತಿಕ ಬಣ್ಣ ಬಳಸಿ ರಚಿಸಿದ್ದಾರೆ. ಹಾಗಾಗಿ ಅನೇಕ ವರ್ಷಗಳು ಉರುಳಿದರೂ ಚಿತ್ರಗಳು ಮಾಸದೆ ಹಾಗೆಯೇ ಉಳಿದಿದೆ. ಇಲ್ಲಿ ರಚಿಸಲಾದ ಚಿತ್ರಗಳಲ್ಲಿನ ಜೀವಿಗಳಿಗೆ ಮುಖವಿಲ್ಲ. ದೇಹಾಕಾರ ಮಾತ್ರ ಇದೆ. ಪೂರ್ವಜರು ತಮ್ಮ ಕಲ್ಪನೆಯಲ್ಲಿ ಅನ್ಯಗ್ರಹದ ಜೀವಿಗಳನ್ನು ಚಿತ್ರಿಸಿದ್ದಾರೆ' ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆಹಾಕಲು ಪುರಾತತ್ವ ಮತ್ತು ಸಂಸ್ಕೃತಿ ಇಲಾಖೆ ನಾಸಾ ಹಾಗು ಇಸ್ರೋಗಳ ಸಹಾಯ ಕೋರಲು ಚಿಂತಿಸಿದೆ ಎಂದರೆ ಅನ್ಯಗ್ರಹ ಜೀವಿಗಳು ಭೂಲೋಕವಾಸಿಗಳಲ್ಲಿ ಸೃಷ್ಟಿಸಿದ ಕುತೂಹಲ, ಭೀತಿ, ಆತಂಕ, ಪ್ರಶ್ನೆಗಳ ಪುಂಜ ಕಡಿಮೆಯೆ ಹೇಳಿ?
'ಏಲಿಯನ್ಸ್' ಗುಮಾನಿಗೆ ಪುಷ್ಟಿ ಕೊಟ್ಟಿದೆ ಇನ್ನೊಂದು ಪಳೆಯುಳಿಕೆ!
ಏಲಿಯನ್‌ಗಳ ಇರುವಿಕೆಯ ಬಗ್ಗೆ ವಿಜ್ಞಾನ ಪ್ರಪಂಚದ ಕುತೂಹಲ ಕೆದಕುವ ಇನ್ನೊಂದು ಸಂಗತಿ ಶ್ರೀಲಂಕದಲ್ಲಿ ನಡೆದಿತ್ತು. 2012ರ ಡಿಸಂಬರ್‌ನಲ್ಲಿ ಶ್ರೀಲಂಕಾದ ಕೇಂದ್ರ ಪ್ರದೇಶದ ಸಮುದ್ರದಂಡೆಯ ಮೇಲೆ ಚಿಕ್ಕ ಪಳೆಯುಳಿಕೆಯ ತುಂಡೊಂದು ಆಕಾಶದಿಂದ ಬಿದ್ದು ಅಚ್ಚರಿ ಹುಟ್ಟಿಸಿತ್ತು. ಆಕಾಶದಿಂದ ಬಿದ್ದ ಆ ವಸ್ತುವು ಸ್ಥಳೀಯರ ಕಣ್ಣಿಗೆ ಬಿದ್ದಾಗ ಅದು ಹೊಗೆಯಾಡುತ್ತಿತ್ತು. ಕಲ್ಲಿನಂತೆ ಕಂಡ ಈ ಪಳೆಯುಳಿಕೆಯ ತುಂಡನ್ನು ಅಧ್ಯಯನ ಮಾಡಿದ ಶ್ರೀಲಂಕಾದ ಪ್ರೊ. ಚಂದ್ರ ವಿಕ್ರಮಸಿಂಗ್ ಈ ಘಟನೆ ಏಲಿಯನ್ಸ್ ಇರುವಿಕೆಯನ್ನು ಖಾತರಿಪಡಿಸುತ್ತದೆ ಎಂದಿದ್ದಾರೆ. ಬ್ರಿಟೀಷ್ ಲೈಬ್ರರಿಯ ಪ್ರಬಲ ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿದಾಗ ಇದು ಪಳೆಯುಳಿಕೆ ಎಂಬುದು ಖಾತರಿಯಾಗಿದೆ. ಅಲ್ಲದೆ ಭೂಮಿಯ ಮೇಲೆ ಸುಮಾರು 55 ದಶಲಕ್ಷ ವರ್ಷಗಳ ಹಿಂದಿನ (ಡೈನೋಸಾಸರ್ ಅವಧಿಯ) ಪಳೆಯುಳಿಕೆಗೆ, ಹೀಗೆ ಆಕಾಶದಿಂದ ಉರಿದು ಬಿದ್ದ ಈ ಪಳೆಯುಳಿಕೆಗಳಿಗೆ ಹೋಲಿಕೆಯಾಗುತ್ತಿದ್ದವು. ಬ್ರಿಟೀಷ್ ವಿಜ್ಞಾನಿಗಳೂ ಇದು ಏಲಿಯನ್‌ಗಳ ಪಳಯುಳಿಕೆ ಇರಬಹುದು ಎಂದಿದ್ದಾರೆ. ಈ ಮೂಲಕ ಭೂಮಿಯಂತೆಯೇ ಇನ್ನೊಂದು ಗ್ರಹದಲ್ಲಿ ಜೀವಿಗಳು ಇರಬಹುದು ಎಂಬ ಅಚ್ಚರಿಯ ಹಕ್ಕಿಗೆ ರೆಕ್ಕೆಬಂದಂತಾಗಿದೆ!
ಕಾನ್ಪುರದಲ್ಲೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಅಭಿಜಿತ್ ಎಂಬ ಬಾಲಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಏಲಿಯನ್ಸ್ ಸೆರೆ ಹಿಡಿದಿದ್ದೇನೆ ಎಂದು ಹೇಳಿಕೊಂಡು ಫೋಟೋಗಳನ್ನು ಕೂಡ ತೋರಿಸಿದ್ದ. ಈ ಸುದ್ದಿ ಎಲ್ಲಡೆ ಹರಿದಾಡಿ ಜನ ಫೋಟೋ ನೋಡಲು ಬಾಲಕನ ಮನೆಯತ್ತ ಧಾವಿಸುತ್ತಿದ್ದರು. ಆದರೆ ಫೋಟೋಗಳನ್ನೂ ಮೊಬೈನ್ನೂ ಪರಿಶೀಲಿಸಿದ ಅಲ್ಲಿನ ಐಐಟಿ ಪ್ರಾಧ್ಯಾಪಕರು ಯುಎಫ್ಒ ಫೋಟೋ ಆ್ಯಪ್ ಅಥವಾ ಸಾಫ್ಟ್‌ವೇರ್‌ನಲ್ಲಿ ಏಲಿಯನ್ಸ್ ಹಾಗೆ ಕಾಣುವಂತೆ ಫೋಟೋಗಳನ್ನು ಈತ ಎಡಿಟ್ ಮಾಡಿದ್ದಾನೆ. ಅವು ನಿಜವಾದ ಏಲಿಯನ್‌ಗಳಲ್ಲ ಎಂದು ಪ್ರಾಧ್ಯಾಪಕರು ಶಂಕೆ ವ್ಯಕ್ತಪಡಿಸಿದರು. ತಜ್ಞರೂ ಇದನ್ನು ಖಾತ್ರಿ ಪಡಿಸಿದ್ದಾರೆ; ಇವು ಅಸಲಿ ಏಲಿಯನ್‌ಗಳಲ್ಲ, ಸಾಫ್ಟ್‌ವೇರ್‌ಗಳಿಂದ ಸೃಷ್ಟಿಸಿದ ಭಂಡಲ್ ಏಲಿಯನ್‌ಗಳೆದು!
ಇಂಥ ಗಿಮಿಕ್‌ಗಳು ಈಗಲೂ ನಡೆಯುತ್ತಿರುತ್ತವೆ. ಅನ್ಯಗ್ರಹ ಜೀವಿಗಳನ್ನು ನೋಡಿದ್ದೇವೆ, ಆ ಗುಡ್ಡದ ನಿರ್ಜನ ಪ್ರದೇಶದಲ್ಲಿ ಕಂಡಿತು, ಒಬ್ಬನೇ ರೂಮಿನಲ್ಲಿ ಕುಳಿತಿದ್ದಾಗ ಕಿಟಕಿಯಲ್ಲಿ ಇಣುಕಿತು ಅಂತ ಬಿಟ್ಟಿ ಪ್ರಚಾರ ಕೊಡುವ ಭಂಡಲ್‌ರಾಜರು ನಮ್ಮಲ್ಲಿ ಕಡಿಮೆಯಿಲ್ಲಬಿಡಿ. ಇತ್ತೀಚೆಗೆ ಗೆಳೆಯನ ಮೊಬೈಲ್ ಪರದೆಯಲ್ಲಿ ಒಂದು ವಾಟ್ಸ್ಯಾಪ್ ವೀಡಿಯೋ ನೋಡುತ್ತಿದ್ದೆ. ಅದರಲ್ಲಿ ಯಮವೇಗದಲ್ಲಿ ಬಂದು ಗುದ್ದಬೇಕಿದ್ದ ವಾಹನದಿಂದ ಕೈಗಾಡಿಯವನನ್ನು ಅಸ್ಪಷ್ಟ ಆಕೃತಿಯೊಂದು ಸರಸರನೆ ಬಂದು ಬಚಾವು ಮಾಡಿ, ಹಾಗೇ ಸೀದ ಹೋಗುವ ದೃಶ್ಯ(ಕ್ಲಿಪ್)ವೊಂದಿತ್ತು. ಆ ಕ್ಲಿಪ್ ಫೋಲ್ಡರಿಗೆ ಹೆಲ್ಪಿಂಗ್ ಏಲಿಯನ್ ಅಂತ ನಾಮ(!)ಕರಣವೂ ಆಗಿತ್ತು. ಆ ಹೊತ್ತಿಗಾಗಲೇ ಏಲಿಯನ್ ಕುರಿತಾಗಿ ಒಂದಷ್ಟು ಮಾಹಿತಿಗಳನ್ನು ಕಲೆಹಾಕಿದ್ದ ನಾನು ಆ ಹೆಲ್ಪಿಂಗ್ ಏಲಿಯನ್ ಕ್ಲಿಪ್ಪನ್ನು ನಂಬಬೇಕಿತ್ತೋ ಬೇಡವೋ ನೀವೇ ಹೇಳಬೇಕು!
ಅನ್ಯಜೀವಿ ಅಧ್ಯಯನಕ್ಕೆ ಆಪರೇಶನ್ ಏಲಿಯನ್ ರೆಡಿಯಾಗಿದೆ!
'ಅನ್ಯಗ್ರಹಜೀವಿ' ಎಂಬುದು ಮಾನವನ ಪಾಲಿಗೆ ಸಾವಿರಾರು ವರ್ಷಗಳಿಂದ ಕಾಡುತ್ತಿದ್ದ ಬಹುದೊಡ್ಡ ಪ್ರಶ್ನೆಯಾಗಿದೆ. ಅನ್ಯಗ್ರಹ ಏಲಿಯನ್ಸ್ ಪತ್ತೆಗಾಗಿ ಶತಮಾನದಿಂದ ಸಂಶೋಧನೆಗಳು ನಡೆಯುತ್ತಿದೆ ಎಂದೂ ಈ ಮೊದಲೇ ಹೇಳಿಯಾಗಿದೆ. ಭೂಮಿಗೆ ಆಗಾಗ ಭೇಟಿ ನೀಡಿ ಮುನುಷ್ಯನಿಗೆ ಕಾಣಿಸಿಕೊಂಡು, ಕುತೂಹಲ ಕೆರಳಿಸುತ್ತಿರುವ ಈ ಮಾಯಾ ಜೀವಿಗಳ ವಾಸ ಸ್ಥಾನ ಎಲ್ಲಿದೆ? ಅಸಲಿಗೆ ಏಲಿಯನ್‌ಗಳ ಊರು ಯಾವುದು? ಎಲ್ಲಿಂದ ಬರುತ್ತಿದೆ? ಎಲ್ಲಿಗೆ ಹೋಗುತ್ತಿದೆ? ಅವುಕ್ಕೆ ಭೂಮಿಗೆ ಬರುವ ಉದ್ದೇಶವಾದರೂ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಏಲಿಯನ್‌ಗಳು ಹೆಚ್ಚಿನ ಕುರುಹನ್ನೇನೂ ಭೂಮಿಯಲ್ಲಿ ಬಿಟ್ಟು ಹೋಗಿಲ್ಲ (ಅಥವಾ ಸಿಕ್ಕಿಲ್ಲ!). ಆದರೂ ಏಲಿಯನ್ ಕುರಿತ ಈ ಎಲ್ಲಾ ಪ್ರಶ್ನೆಗಳ ಬೆನ್ನುಬೀಳುವ ಪ್ರಯತ್ನ ಈಗಾಗಲೇ ಶುರುವಾಗಿದೆ.
ಅನ್ಯಗ್ರಹ ಜೀವಿಗಳ ಮೂಲ ಪತ್ತೆಗಾಗಿ ಬೃಹತ್ ಯೋಜನೆ!
ಏಲಿಯನ್ಸ್ ಗಳ ಪತ್ತೆಗಾಗಿ ವಿಜ್ಞಾನಿಗಳ ತಂಡದಿಂದ ಕೋಟಿಗಟ್ಟಲೆ ವೆಚ್ಚದ ಪ್ರಾಜೆಕ್ಟ್ ರೆಡಿಯಾಗಿದೆ. ಏಲಿಯನ್‌ಗಳ ನೆಲೆ (ಇರುವುದೇ ಹೌದಾದರೆ) ಪತ್ತೆ ಹಚ್ಚಿಯೇ ತೀರುತ್ತೇವೆ ಅಂತ ಉನ್ನತ ವಿಜ್ಞಾನ ತಂಡ ತುದಿಗಾಲಲ್ಲಿ ನಿಂತಿದೆ. ಈ ಯೋಜನೆಯ ಪ್ರಕಾರ ಮುಂದಿನ ಕೆಲ ವರ್ಷದಲ್ಲಿ ಅನ್ಯಗ್ರಹ ಜೀವಿಗಳು

ಸಿಕ್ಕೇಬಿದ್ದೆ ಅಂತ ಹೇಳಲಿವೆ. ಏಲಿಯ
ನ್ಗಳಿಗಾಗಿ 100 ಗ್ಯಾಲಕ್ಸಿಗಳಲ್ಲಿ ಹುಡುಕಾಟ ನಡೆಯಲಿದೆ. ಇದಕ್ಕಾಗಿ ನೂರಾರು ಕೋಟಿ ವೆಚ್ಚವಾಗಲಿದ್ದು ವಿಜ್ಞಾನಿ ಸ್ಟೀಫನ್ ಹಾಕಿಂಗ್ ನೇತೃತ್ವದಲ್ಲಿ ಯೋಜನೆ ಚುರುಕುಗೊಂಡಿತ್ತು. ಏಲಿಯನ್‌ಗಳ ಬಗ್ಗೆ ಅತೀವ ಆಸಕ್ತಿ, ಕುತೂಹಲವನ್ನು ಹೊಂದಿರುವ ರಷ್ಯಾದ ಉದ್ಯಮಿ ಯೂರಿ ಮಿಲ್ಮರ್ 700 ಕೋಟಿ ರೂ. ಕೊಡುವ ಮೂಲಕ ಏಲಿಯನ್ಸ್ ಗುಟ್ಟು-ರಟ್ಟಾಗಿಸಲು ಹೊರಟಿರುವ ಸ್ಟೀಫನ್ ಹಾಕಿಂಗ್ ತಂಡದೊಂದಿಗೆ ಕೈ ಜೋಡಿಸಿದ್ದಾರೆ (ಈಗ ಹಾಕಿಂಗ್ ನಿಧನರಾಗಿದ್ದಾರೆ. ಆದರೆ ಹಾಕಿಂಗ್ ನಿಧನಕ್ಕೂ ಮೊದಲೇ ಏಲಿಯನ್ ಪತ್ತೆಗಾಗಿ ಪ್ರಾಜೆಕ್ಟ್ ರೆಡಿಯಾಗಿತ್ತು).
ಇಡೀ ಭೂಮಿಯಲ್ಲೇ ಒಂದು ಮಹತ್ವದ ಹೆಜ್ಜೆಯಾಗಿರುವ ಈ 'ಏಲಿಯನ್ಸ್ ಅಪರೇಷನ್' ಯೋಜನೆ ಸಕ್ಸಸ್ ಆದರೆ ಏಲಿಯನ್‌ಗಳ ಎದೆ ಝಲ್ ಎನ್ನಲಿಕ್ಕೂ ಸಾಕು. ಹಾಗೆ ಸಿಕ್ಕುಬಿದ್ದು ಹೆದರಿಯೋ ಇಲ್ಲವೆ ಕೆರಳಿಯೋ ಅವು ಭೂಮಿಯನ್ನು, ಮಾನವರನ್ನು ಗಲ್ಲೆಬ್ಬಿಸಲಿಕ್ಕೂ ಸಾಕು!
ಅನ್ಯಜೀವಿಗಳ ಪತ್ತೆಗಾಗಿ ಸಾಮಾಜಿಕ ಜಾಲತಾಣಗಳಾದ ಗೂಗಲ್, ಫೇಸ್ ಬುಕ್ ಸಂಸ್ಥೆಗಳೂ ಸಾಥ್ ನೀಡಿವೆ. ಈ ಬೃಹತ್ ಯೋಜನೆಯ ಮೂಲಕ ಏಲಿಯನ್‌ಳ ಬಗ್ಗೆಯಿದ್ದ ಸಾವಿರಾರು ಪ್ರಶ್ನೆಗಳಿಗೆ ಉತ್ತರಸಿಕ್ಕೀತಾ ಅನೋದಕ್ಕೆ ಕಾಲವೇ ಉತ್ತರಿಸಬೇಕು. ನಾವಲ್ಲಿಯವರೆಗೆ ಕಾಯಲೇಬೇಕು..
ಸ್ಟೀಫನ್ ಹಾಕಿಂಗ್
ಇಂಗ್ಲೆಂಡಿನ ಸ್ಟೀಫನ್ ವಿಲಿಯಂ ಹಾಕಿಂಗ್ ಜನಿಸಿದ್ದು ಜನವರಿ 8. 1942ರಲ್ಲಿ. ಇವರೊಬ್ಬರು ಭೌತಶಾಸ್ತ್ರ ವಿಜ್ಞಾನಿ, ಕಾಸ್ಮಾಲಜಿಸ್ಟ್ ಮತ್ತು ಇಂಗ್ಲೆಂಡಿನ ಸೆಂಟರ್ ಫಾರ್ ಥಿಯರಿಟಿಕಲ್ ಕಾಸ್ಮಾಲಜಿಯ ನಿರ್ದೇಶಕ. ಹಾಕಿಂಗ್ ಬಲ್ಯದಿಂದಲೂ ಅಮೈಯೊಟ್ರೋಫಿಕ್ ಲ್ಯಾಟರಲ್ ಸ್ಲೆರೋಸಿಸ್ ಎಂಬ ನರ ಸಂಬಂಧಿ (ಪಾರ್ಶ್ವವಾಯು ತೆರನಾದ) ಖಾಯಿಲೆಯ ಪರಿಣಾಮ ಅಂಗವಿಕಲತೆಯಿಂದ ಬಳಲುತ್ತಿದ್ದರು. ಆದರೂ ಈತ ವಿಜ್ಞಾನ ಕ್ಷೇತ್ರದ ಬಲುದೊಡ್ಡ ಸಾಧಕರೆನಿಸಿಕೊಂಡಿದ್ದರು. ರಾಯಲ್ ಸೊಸೈಟಿ ಆಫ್ ಆರ್ಟ್ಸ್, ಪಾಂಟಿಫಿಕಲ್ ಸೊಸೈಟಿ ಆಫ್ ಸೈನ್ಸ್ ಇತ್ಯಾದಿ ಸಂಸ್ಥೆಗಳ ಆಜೀವ ಸದಸ್ಯತ್ವವನ್ನು ಹೊಂದಿದ್ದ ಇವರಿಗೆ ವಿಶ್ವದ ಮಹಾನ್ ಗೌರವಗಳು ದೊರೆತಿವೆ. ಹಾಕಿಂಗ್ 2018ರ ಮಾರ್ಚ್ 14ರಂದು ಯುನೈಟೆಡ್ ಕಿಂಗ್ಡಮ್‌ನಲ್ಲಿ ನಿಧನ ಹೊಂದಿದರು.
ಯೂರಿ ಮಿಲ್ನರ್ ಸೋವಿಯತ್ ರಷ್ಯಾದಲ್ಲಿ 1961 ನವೆಂಬರ್ 11ರಲ್ಲಿ ಜನಿಸಿ ಉದ್ಯಮ ಕ್ಷೇತ್ರಕ್ಕಿಳಿದ ಉದ್ಯಮಿಯಿವರು. ರಷ್ಯಾದ ಉದ್ಯಮ ಕ್ಷೇತ್ರದ ಪ್ರಮುಖ ಬಂಡವಾಳಶಾಹಿ. ಬಂಡವಾಳ ಹೂಡಿ ಡಿಜಿಟಲ್ ಸ್ಕೈ ಟೆಕ್ನಾಲಜಿ (DST) ಸ್ಥಾಪಿಸಿದ ತಂತ್ರಜ್ಞಾನ ಪ್ರೇಮಿಯೂ ಹೌದು. ಫೇಸ್ಬುಕ್, ಝಿಂಗ, ಟ್ವಿಟರ್, ಫ್ಲಿಪ್‌ಕಾರ್ಟ್, ಸ್ಪೋಟಿಫೈ, ಝೋಗ್‌ಡಾಕ್, ಗ್ರೂಪ್ಆನ್, ಜೆಡಿ ಡಾಟ್ ಕಾಂ, ಪ್ಲ್ಯಾನೆಟ್ ಲ್ಯಾಬ್, ಕ್ಸಿಯೋಮಿ, ಓಲಾಕ್ಯಾಬ್ಸ್, ಆಲಿಬಾಬಾ ಇತ್ಯಾದಿ ವಿವಿದ್ದೋದೇಶ, ವೈವಿದ್ಯ ಸಂಸ್ಥೆಗಳಿಗೆ ಪಾಲುದಾರರಾಗಿದ್ದಾರೆ. 2010ರಲ್ಲಿ ವಿಶ್ವದ 50 ಪ್ರಮುಖ ಉದ್ಯಮಿಗಳಲ್ಲಿ ಗುರುತಿಸಿಕೊಂಡಿದ್ದರು.
-ಸದಾ ಸಕಲೇಶಪುರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ