ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ನಿನ್ನಾ ಸೊಂಟಕ್ಕೆ ಕುಣಿಯೋ ಕಲೆಯನ್ನು ಕಲಿಸಿಕೊಟ್ಟವರ್ಯಾರೆ? (ಭಾವ ಬೆಸುಗೆ)

ನಿನ್ನನ್ನು ನೋಡುವಾಗೆಲ್ಲಾ ಸೋನು ನಿಗಂ ಹಾಡಿರೋ 'ನಿನ್ನ ಹಿಂದೆಯೆ.. ಹಿಂದೆಯೇ ಬರುವೆ ನಾನು.. ಇನ್ನೂ ಮೆಲ್ಲಗೆ.. ಮೆಲ್ಲಗೇ ಚಲಿಸು ನೀನು..' ಅನ್ನೋ ಸಾಲೇ ಕಿವಿಯ ಬಳಿ ಗುಂಯ್ಗುಟ್ಟಿ ನಿನ್ನನ್ನೇ ಹಿಂಬಾಲಿಸಿ ಬಿಡಬೇಕನ್ನೋ ತೆವಲು ಹತ್ತಿಸುತ್ತೆ. ನನ್ನೆದುರಿಂದಾಗಿ ನೀನು ಹಾದುಹೋಗುವಾಗ ನಾನು ನಿನ್ನ ನಡುವನ್ನೇ ದಿಟ್ಟಿಸಿ ನನ್ನೊಳಗೇ ನಗೋದನ್ನು ನಿನ್ನ ಕಂಗಳು ಕಂಡಿರಬೇಕು. ಹಾಗಾಗೇ ನೀನು ಆ ಸೊಂಟ ಬಳುಕದ ಹಾಗೆ ನೋಡಿಕೊಳ್ಳುವ ತರಾತುರಿಯಲ್ಲಿ ನಿನಗೇ ಅರಿವಿಲ್ಲದೆ ಆ ನಡುವನ್ನು ಉಯ್ಯಾಲೆಯ ಹಾಗೆ ಇನ್ನಷ್ಟು ಬಳುಕಿಸುತ್ತೀಯಲ್ಲ ಅದು! ನನಗಂತೂ ದಾರಿ ಸಾಗಿದ್ದೇ ಗೊತ್ತಾಗೊಲ್ಲ, ಈ ಕಾಲುಗಳಿಗೆ ಸುಸ್ತೂ ಆಗಲ್ಲ. ನೀನು ಮುಂದೆ ನಡೆಯುತ್ತಿದ್ದರೆ ಸಾಕು; ಕಾಲು ತಂತಾನೇ ಹೆಜ್ಜೆ ಹಾಕುತ್ತೆ. ನಿನ್ನೊಡನೆ ಇನ್ನಷ್ಟು ದೂರ ನಡೆಯುತ್ತಲೇ ಬರಬೇಕು ಅನ್ನಿಸುತ್ತೆ. ಅಬ್ಬಬ್ಬಾ! ನಿನ್ನಾ ಸೊಂಟದ ಬಳುಕುವ ಕಲೆಗೆ ಅದೆಂಥಾ ಶಕ್ತಿಯೋ, ಆ ಸಪೂರ ಸೊಂಟಕ್ಕೆ ಬಳುಕುವ ಕಲೆಯನ್ನು, ಸೆಳೆಯುವ ಪರಿಯನ್ನು ಕಲಿಸಿಕೊಟ್ಟವರಾದ್ರೂ ಯಾರು ಮಾರಾಯ್ತಿ?

ನಾನು ನಿನ್ನಾ ಉಯ್ಯಾಲೆ ಸೊಬಗಿಗೆ ಜೋತುಬಿದ್ದು ಹಿಂದೆಯೇ ನಡೆದಾಗ ನೀನು ದುರುದುರು ನೋಡುತ್ತೀಯಲ್ಲ ಆಗ ಇವ್ಳ ಸೊಂಟದ ವಿಷ್ಯಕ್ಕೆ ಇನ್ನು ಬರಲೇ ಬಾರದಪ್ಪಾ ಅಂದುಕೊಳ್ಳುತ್ತೇನೆ. ಆದರೂ ನಿನ್ನ ನಡಿಗೆಯ ಪರಿಗೆ, ಮರುಳಾಗದೆ ನನಗೆ ವಿಧಿಯೇ ಇಲ್ಲದಾಗಿದೆ ಏನು ಮಾಡಲಿ. ಒಮ್ಮೊಮ್ಮೆ ತಲೆ ಕೆರೆದುಕೊಂಡು ಯೋಚಿಸುತ್ತೇನೆ; ಅದ್ಹ್ಯಾಗೆ ನಡೀತಾಳಪ್ಪಾ ಇವಳು?! ವಾಕ್ ರೇಸಿಗೆ ಇಳಿದಿರೋ ಅಥ್ಲೆಟ್ಟಿನ ಹಾಗೆ! ಅಂತ. ವಾಕ್ ರೇಸಿನವರಾದರೂ ಸೊಂಟಕ್ಕೆ ತಕ್ಕಂತೆ ಕೈಗಳನ್ನೂ ಲಯಬದ್ಧವಾಗಿ ಬೀಸುತ್ತಾರೆ. ಆದರೆ ನಿನ್ನ ಕೈಗಳಿಗೆ ಆ ಲಿಂಕೇ ಇಲ್ಲ. ಕುಣಿತವೇನಿದ್ದರೂ ಸೊಂಟಕ್ಕಷ್ಟೇ ಸೀಮಿತ. ಕೈಗಳು ಮಾತ್ರ ಅದರ ಪಾಡಿಗೆ ಅದು ಬೀಸುತ್ತಿರುತ್ತದೆಯಷ್ಟೇ. ನಂಗೆ ನಿನ್ನ ಮುಂಗುರುಳು, ಆ ಜುಮ್ಕಿ ಜೋತಾಡುವ ಕಿವಿಗಳು, ಶುಭ್ರ ಕಣ್ಣುಗಳು ಮತ್ತಾ ಕಾಡಿಗೆ ಎಲ್ಲವೂ ಇಷ್ಟಾನೇ. ಆದ್ರೆ ನೀನು ನಡೆದುಹೋಗುವ ರೀತಿ ಮಾತ್ರ ಸತ್ತು ಹೋಗುವಷ್ಟು ಇಷ್ಟ ಕಣೆ. ಇದ್ಯಾವ ಸೀಮೆಯ ಹುಚ್ಚನಪ್ಪಾ, ಇವನ ತಲೆಯ ಬೋಲ್ಟೇನಾದರೂ ಲೂಸಾಗಿರಬೇಕು ಅಂದುಕೊಂಡರೂ ಅಂದುಕೋ ಬೇಜಾರಿಲ್ಲ. ಆದ್ರೆ ಆ ಸಿಟ್ಟಿನಲ್ಲಿ ನಿನ್ನ ನಡೆಯುವ ಶೈಲಿಯನ್ನು ಮಾತ್ರ ಬದಲಿಸಬೇಡವಷ್ಟೇ.

ಬಿಎ ಹುಡುಗ ನಾನು ನನ್ನ ಸಬ್ಜೆಕ್ಟುಗಳಲ್ಲಿ ಜಾಲಾಡಿದರೂ ನಿನ್ನ ಕುಣಿಯುವ ಸೊಂಟದ ಕಾರಣವಿನ್ನೂ ಸಿಕ್ಕೇಯಿಲ್ಲ. ಬಿಎಸ್ಸಿ ಹುಡುಗಿ ನೀನು ನಿನ್ನ ಕೆಮಿಸ್ಟ್ರಿ ಲೋಕದಲ್ಲೇನಾದರೂ ಅದಕ್ಕೆ ಕಾರಣವಿದ್ದೀತಾ ಹುಡುಕಿ ಹೇಳು. ನಂಗೊತ್ತು ಕಣೆ. ನಮ್ಮ ನಡೆ-ನುಡಿಯ ಸಂಗತಿಗಳೆಲ್ಲವೂ ದೇಹಪ್ರಕೃತಿಗನುಗುಣವಾಗಿ ನಡೆದುಹೋಗುವಂತದ್ದು. ಒಮ್ಮೊಮ್ಮೆ ಅವು ನಮ್ಮ ಮಾನಸಿಕತೆಯನ್ನೂ ಅವಲಂಬಿತವಾಗಿರುತ್ತದೆ. ಅವನ್ನು ಒಮ್ಮಿಂದೊಮ್ಮೆಲೆ ಬದಲಿಸಲು ಸಾಧ್ಯಲಿಲ್ಲ. ಹಾಗಂತ ನೀನು ಭಿನ್ನಳೇನಲ್ಲ. ನಿನ್ನ ಮಟ್ಟಿಗೆ ನೀನು ಸರಿಯಾಗೇ ನಡೆಯುತ್ತಿದ್ದೀ. ಆದರೆ ನೀನೆ ಇಷ್ಟವಾಗಿರುವ ನನಗೆ ನಿನ್ನ ನಡೆಯುವ ಶೈಲಿಯೂ ತಂತಾನೇ ಇಷ್ಟವಾಗಿಬಿಟ್ಟಿದೆ. ಸುಮ್ಮನಾದರೂ ನಿನ್ನ ಹಿಂಬಾಲಿಸಬೇಕು ಅಂತ ರಚ್ಚೆ ಹಿಡಿಯುವ ಈ ಮನಸ್ಸಿಗೆ ಆ ಕುಣಿಯುವ ಸೊಂಟ ಒಂದು ನೆಪವಾಗಿರಲಿಕ್ಕೂ ಸಾಕು. ಅಂದ್ಹಾಗೆ ಅವತ್ತು ನಾನು ಎಕನಾಮಿಕ್ಸ್ ಇಂಟರ್ನಲ್ ಟೆಸ್ಟ್ ದಿನ ಕಾರಿಡಾರಿನಲ್ಲಿ ನಿಂತಿದ್ದಾಗ ನೀನು ಕೆಮಿಸ್ಟಿ ಪ್ರ್ಯಾಕ್ಟಿಕಲ್ಸ್ಗೇಂತ ಲ್ಯಾಬಿನತ್ತ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆಯಲ್ಲ? ಆಗ ನಿನ್ನ ಕಾಡಿಗೆಯ ಅಂಚು ನೋಡೋಕೆ ಹಿತ ವೆನಿಸಿತ್ತು.

ಅರೆರೆ! ಈ ಕೋಮಲಾಂಗಿ ಎಲ್ಲಿಯಿದ್ದಳಪ್ಪ ಇಷ್ಟುದಿನ?! ಅಂತ ನಾನು ನಿನ್ನ ಚೆಲುವನ್ನು ಆಸ್ವಾದಿಸುತ್ತ ಆವತ್ತು ನಿಂತುಬಿಡುವಾಗಲೇ ನೀನು ಆ ಹಾಳು ಪ್ರ್ಯಾಕ್ಟಿಕಲ್ಸ್ ಗುಂಗಿನಲ್ಲೇ ನನ್ನೆದುರಿನಿಂದ ಪಾಸಾಗಿಬಿಟ್ಟಿದ್ದೆ. ಹಾಗೆ ನೀನು ನನ್ನೆದುರಿಂದ ಹಾದುಹೋದಾಗಲೇ ಬಿತ್ತು ನೋಡು ಆ ನಿನ್ನ ಬಳುಕುವ ನಡು! ತರಲೆ ನನ್ಮಗ ನಾನು ನಿನ್ನನ್ನೇ ದಿಟ್ಟಿಸಿ ವಾಟ್ ಎ ವಾಕಿಂಗ್ ಸ್ಟೈಲ್ ಅಂತ ಉದ್ಗರಿಸುವುದರೊಳಗಾಗಿ ನೀನು ಸುಯ್ಯನೆ ಕೆಮಿಸ್ಟ್ರಿ ಲ್ಯಾಬಿನೊಳಗೆ ಮಾಯವಾಗಿಬಿಟ್ಟಿದ್ದೆ! ನಿನ್ನದೇ ಗುಂಗಿನಲ್ಲಿ ನಗುತ್ತ ಅವತ್ತು ಆ ಎಕನಾಮಿಕ್ಸ್ ಎಕ್ಸಾಮಿನಲ್ಲಿ ಅದೇನೇನು ಗೀಚಿಬಂದೆನೋ ದೇವ್ರಾಣೆ ನೆನಪಿಲ್ಲ. ಒಟ್ಟಿನಲ್ಲಿ ಅವತ್ತು ನಾನು ಮರುಳಾಗಿಬಿಟ್ಟಿದ್ದೆ. ನಿನ್ನ ಹಿಂಬಾಲಕನಾಗುವ ಹುಚ್ಚಿನಲ್ಲಿ ಬಿದ್ದುಬಿಟ್ಟೆ.

ನಿನ್ನ ಕೆಮಿಸ್ಟ್ರಿ ತಲೆಗೇನು ಈ ಮನದ ಪೀಲಿಂಗ್ಸು ಅರ್ಥವಾಗಲಿಕ್ಕಿಲ್ಲವಾ? ಅಥವಾ ಆ ನಿನ್ನ ನೈಟ್ರೋಜನ್, ಫಾಸ್ಪೇಟ್, ಝಿಂಕ್ ಮುಂತಾದ ಕೆಮಿಕಲ್ ಲೋಕದಲ್ಲಿ ಭಾವನೆಗಳಿಗೆ ಜಾಗಾನೇ ಇಲ್ವಾ? ನಂಗಂತೂ ಗೊತ್ತಿಲ್ಲ. ನಿನ್ನ ನಡುವನ್ನು ದಿಟ್ಟಸುತ್ತಾ ನಿಂತುಬಿಡುವ ನನ್ನೆದುರು ಸಿಡುಕುತ್ತೀಯಾದರೂ ಆ ಮೂತಿಯಲ್ಲೊಂದು ಖುಷಿಯ ಮಿಂಚು ಬಂದುಹೋಗೋದನ್ನು ಕಂಡಿದ್ದೇನೆ. ಎಂಥಾ ಕೆಮಿಸ್ಟ್ರಿ, ಮ್ಯಾಥಮ್ಯಾಟಿಕ್ಸ್, ಎಕೌಂಟ್ಸ್ ತಲೆಗಾದರೂ ಭಾವನೆಗಳ ಮೆಲುದನಿ ತಾಕಿಯೇ ತಾಕುತ್ತದೆಯೆಂದಷ್ಟೇ ನಂಬಿದ್ದೇನೆ. ಅಷ್ಟು ದೂರದಲ್ಲಿ ನೀನಷ್ಟೇ ನಡೆದು ಹೋಗಬೇಡ; ನಾವಿಬ್ಬರೂ ನಮ್ಮ ಮುದ್ದಿನ ಪಾಪೂನ ಕೈಕೈ ಹಿಡಿದು ಜೊತೆಯಾಗಿ ನಡೆಯೋಣ. ಆ ಮುದ್ದಿನ ಕೂಸಿಗೆ ಮುತ್ತಿನ ಮಳೆಗರೆದು ಎಲ್‌ಕೆಜಿಯಲ್ಲಿ ಬಿಟ್ಟುಬರೋಣ. ಜೀವ ಇರುವಷ್ಟು ದಿನ ಜೊತೆ ಜೊತೆಯಾಗಿ ಹೆಜ್ಜೆ ಹಾಕೋಣ, ಬರುತ್ತೀಯಾ..?
'ನಿಂತರೆ ನೀ ನಿಲ್ಲುವೆನು.. ಕಾಣದೆ ಹೋದರೆ ಬೇಯುವೆನು.. ನಿನಗಾಗಿ ಕಾಯುವೆನು..' ಅಂತ ಸೋನು ನಿಗಂ ಮತ್ತೆ ನನ್ನದೇ ಹಾಡನ್ನು ನಿನಗಾಗಿ ಹಾಡುತ್ತಿದ್ದಾನೆ ನೋಡು..

-ಸದಾ ಸಕಲೇಶಪುರ.    

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು