ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಅವನ ಪತ್ರ

ಮತ್ತೆ ‘ಅವನ’ ಪತ್ರ ಬಂದಿತ್ತು. ಅವಳನ್ನು ಭಾವನಾ ಲೋಕದಲ್ಲಿ ತೇಲಿಸುವ ಪತ್ರ. ‘ಅವಳು’ ಯಾವಾಗಲೂ ಬಲು ಕಾತರದಿಂದ ನಿರೀಕ್ಷಿಸುವ ಅದೇ ಹುಡುನ ಪತ್ರ ಕೆಲ ದಿನಗಳ ನಂತರ ಬಂದಿತ್ತು. 

ಒಂದು ಕ್ಷಣ ಮನವೆಲ್ಲ ಏನೋ ಉಲ್ಲಾಸ ತುಂಬಿಕೊಂಡ ಹಾಗಾಯ್ತು ಅವಳಿಗೆ. ಅವನ ಪತ್ರ ಕೈಯಲ್ಲಿರಲು ಅದೇನೋ ಕುತೂಹಲ, ಕಾತರ, ಉತ್ಸಾಹ, ಪುಳಕ, ಸಣ್ಣದಾಗಿ ನಡುಕ ಬೇರೆ. ಭಾವನೆಗಳನ್ನು ಕೆದಕುವ ಅವನ ಪತ್ರ ಅವಳಲ್ಲಿ ಪ್ರತೀ ಬಾರಿಯೂ ವಿಚಿತ್ರ ಅನುಭವ ತಂದುಬಿಡುತ್ತಿತ್ತು. ಸದಾ ಮಂದಹಾಸ ಬೀರುವ ಅವನ ಮುಖವನ್ನೊಮ್ಮೆ ಜ್ಞಾಪಿಸಿಕೊಂಡವಳೇ ತಾನೂ ಸಣ್ಣದಾಗಿ ನಕ್ಕು ಮೆಲ್ಲಗೆ ಪತ್ರ ತೆರೆದಳು.

‘ಒಲವಿನ ಗೆಳತಿ ಸುಮ, ನಿನ್ನ ನಿಜವಾದ ಹೆಸರು ಬೇರೆಯೇ ಇದ್ದರೂ ಮೊದಲಿನಿಂದಲೂ ನಿನ್ನನ್ನು ಸುಮ ಎಂದೇಕೆ ಕರೆಯುತ್ತಿದ್ದೇನೆ ಎಂದು ನೀನು ಯೋಚಿಸಿರಬಹುದು. ಅದ್ಯಾಕೋ ಗೊತ್ತಿಲ್ಲ; ಹೂವಿನಂತೆ ಮುದ್ದಾಗಿರುವ, ಸುಮದಂತ ಮೃದು ಮನಸ್ಸಿನ ನಿನ್ನನ್ನು ಸುಮ ಎನ್ನುವ ಹೆಸರಿನಿಂದಲೇ ಕರೆಯಬೇಕೆನಿಸಿತು. ಇತ್ತೀಚೆಗಂತೂ ನೀನ್ಯಾಕೋ ಪದೇ ಪದೇ ನೆನಪಾಗುತ್ತಿದ್ದೀಯ. ಈ ಕ್ಷಣ ನೀನು ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿದ್ದೀಯ ಎಂದೆನಿಸುತ್ತಿದೆ. ನಿನ್ನೊಂದಿಗೆ ಕಳೆದ ಆ ಕೆಲವೇ ಕೆಲ ಕ್ಷಣಗಳು, ಆ ನಿನ್ನ ನಗು, ಮುತ್ತುಗಳುದುರಿದಂತೆ ಸೊಗಸಾಗಿ ಎದೆಗಿಳಿಯುವ ನಿನ್ನ ಮಾತುಗಳನ್ನು ಮತ್ತೆ ಮತ್ತೆ ಕೇಳುತ್ತಲೇ ಕೂತುಬಿಡಬೇಕನ್ನಿಸುತ್ತೆ. ನನಗೇ ಗೊತ್ತಿಲ್ಲದಂತೆ ನಿನ್ನ ಪ್ರೀತಿಯ ಮಧುರವಾದ ಅನುಭವ ಎದೆಯೊಳಗೆ ಕಚಗುಳಿಯಿಟ್ಟಂತೆ ಈಚೀಚೆಗೇಕೋ ಭಾಸವಾಗತೊಡಗಿದೆ. ನಿನ್ನ ಪ್ರೀತಿಯೆಂಬ ಹಿತವಾದ ಬಂಧನದಲ್ಲಿ ನಾನಿದ್ದೇನೋ ಎಂದು ನನಗೆ ಅನ್ನಿಸತೊಡಗಿದೆ. ನಿನ್ನಿಂದ ದೂರ ಹೋಗಬೇಕು ಅಂದುಕೊಂಡಷ್ಟೂ ನಿನಗೆ ಇನ್ನೂ ಹತ್ತಿರವಾಗುತ್ತಿದ್ದೇನೋ ಎಂಬ ಅರಿವೀಗ ಬಲವಾಗತೊಡಗಿದೆ.’

ಎಂದು ಮುದ್ದಾಗಿ ಪೋಣಿಸಿದ ಅವನ ಅಕ್ಷರಗಳನ್ನು ಬೆರಗು, ಕಾತರಭರಿತ ಕಣ್ಣುಗಳಿಂದ ಓದುತ್ತಲೇ ಅವಳು ರೋಮಾಂಚನಗೊಂಡಳು. ಈ ಮೊದಲೇ ಅವನಿಗಾಗಿ ಹಂಬಲಿಸುತ್ತಿದ್ದ ಅವಳು ತುಟಿಯಂಚಿನವರೆಗೂ ಬಂದಿದ್ದ ಹೃದಯದ ಮಾತುಗಳನ್ನು ಅವನಲ್ಲಿ ಹೇಳದೆ ಚಡಪಡಿಸಿದ್ದಳು. ಇವತ್ತು ಅವನ ಪತ್ರದಿಂದಲೇ ಅವನ ಅಂತರಾಳ ಅರಿತ ಇವಳಿಗೆ ಅದ್ಯಾಕೋ ಖುಷಿಯಲ್ಲಿ ಕಣ್ಣಂಚು ಪಸೆಯಾಡಿತು. ಒಂದು ಕ್ಷಣ ಜಗತ್ತೇ ಮರೆತು ಹೋದಷ್ಟು ಹಿಗ್ಗು ಅವಳನ್ನಾವರಿಸಿತು. ಪತ್ರ ಹಿಡಿದಿದ್ದ ಕೈಗಳೇಕೋ ಸಣ್ಣದಾಗಿ ಕಂಪಿಸುತ್ತಿದ್ದವು. ನೋಟ ಮತ್ತೆ ಅಕ್ಷರಗಳ ಮೇಲೆ ಹರಿಹಾಡತೊಡಗಿತು.  

‘ಅನುದಿನವೂ ಬಿಡದೆ ಕೊರೆಯುತ್ತಿದ್ದ ಈ ಮನದ ಭಾವನೆಯನ್ನು ಇವತ್ತು ನಿನ್ನಲ್ಲಿ ಹೇಳಲೇಬೇಕೆನಿಸಿತು. ಯಾಕೆಂದರೆ ಇನ್ನೆರಡು ದಿನಗಳಲ್ಲಿ ನಾನು ದೂರದೂರಿಗೆ ಹೋಗುತ್ತಿರುವುದರಿಂದ ಮತ್ತೆ ಹೇಳಬೇಕೆನಿಸಿದರೂ ಅದಕ್ಕೆ ಅವಕಾಶ ಸಿಗಲಾರದು ಅನ್ನಿಸಿತು. ಇದೇ ಕಾರಣಕ್ಕೆ ಕಾಡುವ ಮನದ ತುಮುಲವನ್ನೆಲ್ಲಾ ಇವತ್ತು ನಿನ್ನೊಂದಿಗೆ ಹರವಿಕೊಂಡುಬಿಟ್ಟೆ. ದಯವಿಟ್ಟು ನನ್ನ ಕ್ಷಮಿಸಿಬಿಡು ಗೆಳತಿ, ಎಲ್ಲಿಗೆ ಹೋಗುತ್ತೀ? ಯಾವಾಗ ವಾಪಸ್ಸಾಗುತ್ತೀ? ಎಲ್ಲಿಗೆ ಹೋದರೂ ಪತ್ರ ಬರೆಯೋದನ್ನು ಮಾತ್ರ ಮರೆಯಲೇಬೇಡ ಎಂದೆಲ್ಲಾ ಹೇಳಿ ಪತ್ರ ಬರೆಯಬೇಡ ಪ್ಲೀಸ್. ನಾನೀಗ ಕೊನೇ ಕ್ಷಣದಲ್ಲಿದ್ದೀನಿ. ನನಗೆ ‘ಬ್ಲಡ್ ಕ್ಯಾನ್ಸರ್’!

ಇಂತಿ ನಿನ್ನ ಹುಡುಗ


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು