ಜಗತ್ತಿನಲ್ಲಿ ಸಾವಿಲ್ಲದವರು ಯಾರೂ ಇಲ್ಲ ಎಂದು ತಿಳಿದವರು ಹೇಳಿರುವುದನ್ನು ನಾವು ಕೇಳಿರುತ್ತೇವೆ. ಅದರರ್ಥ ಹುಟ್ಟಿದ ಎಲ್ಲಾ ಜೀವಿಗಳೂ ಒಂದಿಲ್ಲೊಂದು ದಿನ ಸತ್ತು ಮಣ್ಣು ಸೇರಲೇಬೇಕು. ಹುಟ್ಟು-ಸಾವು ಪ್ರಕೃತಿ ನಿಯಮ. ಆದರೆ ಹುಟ್ಟಿದ ಮೇಲೆ ಸಾವೇ ಇಲ್ಲದ ಅದ್ಭುತ ಜೀವಿಯೊಂದಿದೆ ಜಗತ್ತಿನಲ್ಲಿ. ಒಮ್ಮೆ ಹುಟ್ಟಿದ ಮೇಲೆ ಈ ಜೀವಿಗೆ ಸಾವೆಂಬುದೇ ಇಲ್ಲ. ಅಂದ್ಹಾಗೆ ಈ ಜೀವಿಯ ಹೆಸರು ಜೆಲ್ಲಿ ಫಿಶ್!
ಸಾಗರ ಜೀವಿಯಾದ ಜೆಲ್ಲಿ ಫಿಶ್‌ಗೆ ಟುರ್ರಿಟೋಪ್ಸಿಸ್ ನ್ಯೂಟ್ರಿಕುಲಾ (Turritopsis Nutricula) ಅನ್ನೋ ವೈಜ್ಞಾನಿಕ ಹೆಸರಿದೆ. ಕನ್ನಡದಲ್ಲಿ ಈ ಜೀವಿಯನ್ನು ನೀವು ಲೋಳೆಮೀನು ಅಂತ ಬೇಕಾದರೆ ಕರೆಯಬಹುದು. ಯಾಕೆಂದರೆ ಈ ಮೀನಿಗೆ ಸಾಮಾನ್ಯ ಮೀನಿನ ಹಾಗೆ ದೈಹಿಕ ರಚನೆಯಿರೋಲ್ಲ. ಬದಲಿಗೆ ಇದೊಂಥರಾ ಜೆಲ್ಲಿ ರೀತಿಯಲ್ಲಿರುವ ಮೀನು. ಇದರ ದೇಹ ಪಾರದರ್ಶಕವಾಗಿರುತ್ತದೆ. ತನ್ನ ದೇಹದಲ್ಲಿರುವ ಕಾಲುಗಳ ರೀತಿಯ ಅಂಗವನ್ನು ಕೊಡವಿಕೊಂಡು ಇದು ನೀರಿನಲ್ಲಿ ತಿರುಗಾಡುತ್ತಿರುತ್ತದೆ.
ಹೈಡ್ರೋಝೋವಾ ಅಕಶೇರುಕ (ಅಂದರೆ ಬೆನ್ನು ಮೂಳೆ ಇಲ್ಲದ) ಜೀವಿಗಳ ವರ್ಗಕ್ಕೆ ಸೇರಿರುವ ಜೆಲ್ಲಿ ಫಿಶ್‌ಗಳಿಗೆ ಸಾವೆಂಬುದೇ ಇಲ್ಲ. ಈ ಮೀನುಗಳು ತಮಗೆ ಸಾವು ಬರಲಿದೆ ಎಂದು ಗೊತ್ತಾದ ಕೂಡಲೇ ತನ್ನ ಜನನಾವಸ್ಥೆಯಾದ ಪಾಲಿಪ್ ಸ್ಥಿತಿಗೆ ಬರುತ್ತವೆ. ಅಂದರೆ ವೃದ್ದಾಪ್ಯ(ಮುದಿತನ)ದಿಂದ ನೇರವಾಗಿ ಜನನಾವಸ್ಥೆಗೆ ಪರಿವರ್ತನೆ ಹೊಂದುತ್ತವೆ. ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ (Transdifferentiation) ಎನ್ನುತ್ತೇವೆ. ಹೀಗೆ ಜೆಲ್ಲಿ ಫಿಶ್ ಪರಿವರ್ತನಾ ವಿಧಾನದೊಂದಿಗೆ ಮತ್ತೆ ಮತ್ತೆ ಬಾಲ್ಯಾವಸ್ಥೆಗೆ ಮರಳಿ ಅಮರತ್ವವನ್ನು ಪಡೆಯುತ್ತಲೇ ಇರುತ್ತದೆ. ಹಾಗಂತ ಜೆಲ್ಲಿ ಫಿಶ್‌ಗಳೂ ಸಾಯುತ್ತವೆ. ಆದರೆ ಅದು ಇನ್ನೊಂದು ಜೀವಿಗೆ ಆಹಾರವಾದಾಗ ಮಾತ್ರ. ಬೇರೆ ಜೀವಿಗಳಿಗೆ ಆಹಾರವಾಗದೆ ಹೋದರೆ ಜೆಲ್ಲಿ ಫಿಶ್‌ಗಳಿಗೆ ಸಾವೆಂಬುದೇ ಇರುವುದಿಲ್ಲ.

ಜೀವನ ಪರ್ಯಂತ ಅಂಗಾಗಂಗಳನ್ನು ಮತ್ತೆ ಮತ್ತೆ ಸೃಷ್ಠಿಸಿಕೊಳ್ಳುವ ಶಕ್ತಿ ಅನೇಕ ಜೀವಿಗಳಿಗಿವೆ. ಆಪತ್ಕಾಲದಲ್ಲಿ ಹಲ್ಲಿ, ಓತೀಕ್ಯಾತಗಳು ತಮ್ಮ ಬಾಲವನ್ನು ತಾವೇ ತುಂಡು ಮಾಡಿಕೊಂಡು ಆ ಜಾಗದಿಂದ ಓಡಿ ಹೋಗುತ್ತವೆ. ಆಗ ಶತ್ರು ಜೀವಿ, ತುಂಡಾಗಿ ಒದ್ದಾಡುತ್ತಿರುವ ಬಾಲವನ್ನೇ ಬೇರೊಂದು ಜೀವಿ ಅಂದುಕೊಂಡು ಬಾಲವನ್ನೇ ತಿನ್ನುತ್ತವೆ ಇಲ್ಲವೆ ಆ ಬಾಲದ ಮೇಲೆ ದಾಳಿ ಮಾಡುತ್ತದೆ. ಇತ್ತ ನಮ್ಮ ಚಾಲಾಕಿ ಹಲ್ಲಿ ಅಥವಾ ಓತೀಕ್ಯಾತ ಮಾತ್ರ ಆರಾಮವಾಗಿ ಅಪಾಯದಿಂದ ತಪ್ಪಿಸಿಕೊಳ್ಳುತ್ತದೆ. ಇದೇ ರೀತಿ ನಕ್ಷತ್ರ ಮೀನು ಮತ್ತು ಎರೆ ಹುಳುಗಳ ದೇಹದ ಅಂಗ ತುಂಡಾದರೆ ಮತ್ತೆ ಹುಟ್ಟಿಕೊಳ್ಳುತ್ತವೆ. ಆದರೆ ಇಡೀ ದೇಹವನ್ನೇ ಮತ್ತೆ ಮತ್ತೆ ಪರಿವರ್ತಿಸಿಕೊಂಡು ಸಾಯದೇ ಇರುವ ಜೀವಿಯೆಂದರೆ ಜಗತ್ತಿನಲ್ಲಿ ಜೆಲ್ಲಿಫಿಶ್ ಒಂದೇ.
ಭೂಮಧ್ಯ ರೇಖೆಯ ಸಮಶೀತೋಷ್ಣ ವಲಯದ ಸಾಗರದಲ್ಲಿ ಕಂಡು ಬರುವ ಜೆಲ್ಲಿ ಫಿಶ್‌ಗಳು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸದ ಪುಟಾಣಿ ದೇಹವನ್ನು ಹೊಂದಿರುತ್ತವೆ. ಆಸ್ಟ್ರೇಲಿಯಾ ದೇಶದ ಸಮುದ್ರದಲ್ಲೂ ಈ ಮೀನುಗಳು ಹೇರಳವಾಗಿ ಕಂಡು ಬರುತ್ತವೆ. ಏನೇ ಹೇಳಿ; ಜಗತ್ತಿನಲ್ಲಿ ಸಾವೇ ಇಲ್ಲದ ಜೀವಿಯೊಂದಿದೆ ಎಂದರೆ ಅಚ್ಚರಿ ಅನ್ನಿಸೋದಿಲ್ವೇ? ಅದಕ್ಕೇ ಹೇಳೋದು ಈ ಜಗ-ಸೋಜಿಗ ಅಂತ!
Nice
ಪ್ರತ್ಯುತ್ತರಅಳಿಸಿThank You.
ಅಳಿಸಿUseful information. Thank you
ಪ್ರತ್ಯುತ್ತರಅಳಿಸಿ