ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕನ್ನಡಿಗ ಗುರುರಾಜ್ ಪೂಜಾರಿಗೆ ಅಂತಾರಾಷ್ಟ್ರೀಯ ಬೆಳ್ಳಿ ಪದಕ
265 ಕೆಜಿ ಸಾಧನೆಯೊಂದಿಗೆ ಬೆಳ್ಳಿ ಪದಕ
ಡಿಸೆಂಬರ್ 8ರಂದು ಉಜ್ಬೇಕಿಸ್ತಾನದಲ್ಲಿ ಇಂಟರ್ ನ್ಯಾಷನಲ್ ವೇಟ್ ಲಿಫ್ಟಿಂಗ್ ಫೆಡರೇಶನ್ ಸಹಯೋಗದಲ್ಲಿ ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಮತ್ತು ವರ್ಲ್ಡ್ ಚಾಂಪಿಯನ್ಶಿಪ್ ಏಕಕಾಲದಲ್ಲಿ ನಡೆದಿತ್ತು. ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ 2022ರ ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತಾ ಭಾಗವಾಗಿ ನಡೆದಿದ್ದ ಈ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಕ್ರೀಡಾಪಟುಗಳೂ ಕೂಡ ಸ್ಪರ್ಧಿಸಿದ್ದರು. ಇದರಲ್ಲಿ ಗುರು ಒಟ್ಟು 265 ಕೆಜಿ (117 ಕೆಜಿ ಸ್ನ್ಯಾಚ್, 148 ಕೆಜಿ ಕ್ಲೀನ್ ಆಂಡ್ ಜರ್ಕ್) ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಚಾಂಪಿಯನ್ಶಿಪ್ನಲ್ಲಿ ಒಟ್ಟು 16 ಜನ ಸ್ಪರ್ಧಿಸಿದ್ದು, ಗುರುರಾಜ್ ವಿಭಾಗದಲ್ಲಿ ಮಲೇಷ್ಯಾದ ಸ್ಪರ್ಧಿ ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ಗೆ ಗುರು ತಯಾರಿ
ವರ್ಲ್ಡ್ ಚಾಂಪಿಯನ್ಶಿಪ್ ಮತ್ತು ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಜೊತೆಯಾಗಿ ಸ್ಪರ್ಧಿಸಿದ್ದ ಗುರುರಾಜ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 9ನೇ ಶ್ರೇಯಾಂಕ ಮತ್ತು ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮುಂದಿನ ಅರ್ಹತಾ ಸ್ಪರ್ಧೆಯಲ್ಲಿನ ಪ್ರದರ್ಶನಕ್ಕನುಸಾರ ಕಾಮನ್ವೆಲ್ತ್ ಗೇಮ್ಸ್ 2022ಕ್ಕೆ ಸ್ಪರ್ಧಿಗಳ ಅಂತಿಮ ಪಟ್ಟಿ ನಿರ್ಧಾರವಾಗಲಿದೆ ಎಂದು ಗುರುರಾಜ್ kalaavihaara.comಗೆ ತಿಳಿಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದಿದ್ದ ಸಾಧಕ
ಆಸ್ಟ್ರೇಲಿಯಾದಲ್ಲಿ 2018ರಲ್ಲಿ ನಡೆದಿದ್ದ 21ನೇ ಆವೃತ್ತಿಯ ಪ್ರತಿಷ್ಠಿತ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗುರುರಾಜ್ ಪೂಜಾರಿ ಪುರುಷರ 56 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದು ಆ ಬಾರಿಯ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಬಂದಿದ್ದ ಮೊದಲ ಪದಕವಾಗಿತ್ತು.
ಗುರು ಕೊರಳಿಗೆ ಐದನೇ ಅಂತಾರಾಷ್ಟ್ರೀಯ ಪದಕ
2016ರಲ್ಲಿ ಗುವಾಹಟಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೊದಲ ದಿನವೇ 56 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗುರುರಾಜ್ ಚಿನ್ನಗೆದ್ದಿದ್ದರು. 2016ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್ ವೆಲ್ತ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲೂ ಚಿನ್ನದ ಪದಕ ಜಯಿಸಿದ್ದರು. 2017ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ ಶಿಪ್ ನಲ್ಲಿ ಕಂಚು, 2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಲಭಿಸಿತ್ತು. ಈ ಬಾರಿ ಗುರುಗೆ ಸಿಗುತ್ತಿರುವುದು ಇದು ಐದನೇ ಅಂತಾರಾಷ್ಟ್ರೀಯ ಪದಕ.
ಬಡತನಕ್ಕೆ ಜಗ್ಗದ ಛಲಗಾರ
ಕುಂದಾಪುರ ವಡ್ಸೆ ಗ್ರಾಮದ ಮಹಾಬಲ ಪೂಜಾರಿ-ಪದ್ದು ಪೂಜಾರಿ ದಂಪತಿ ಪುತ್ರ ಗುರುರಾಜ್ ಬಡತನದಲ್ಲಿಯೇ ಬೆಳೆದವರು. ಗುರುವಿನ ತಂದೆ ಆಟೋಡ್ರೈವರ್. ತಾಯಿಯೂ ಕೂಲಿ ದುಡಿಮೆಗೆ ಒಗ್ಗಿಕೊಂಡವರು. ಆರ್ಥಿಕವಾಗಿ ಹಿಂದುಳಿದ ಕುಂಟುಂಬದಲ್ಲಿದ್ದೂ ಕ್ರೀಡೆಯಲ್ಲಿ ಸಾಧಿಸುತ್ತೇನೆ ಅಂತ ಹೊರಡುವವರಿಗೆ ಅಡೆತಡೆಗಳು ಜಾಸ್ತಿ. ಕ್ರೀಡಾಭ್ಯಾಸಕ್ಕೆ ಇಳಿದ ಪ್ರಾರಂಭದಲ್ಲಿ ಗುರುವಿಗೂ ಬಡತನದ ಬೇಗೆ ತಟ್ಟಿದ್ದಿದೆ. ಲಿಫ್ಟಿಂಗ್ ತರಬೇತಿಗೆ ಶೂ, ಕಾಸ್ಟ್ಯೂಮ್, ಪೌಷ್ಠಿಕ ಆಹಾರವಿಲ್ಲದೆ ಬಳಲಿದ್ದಿದೆ. ಆದರೆ ಕೊರತೆಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳದೆ ಸಿಕ್ಕ ಚೂರುಪಾರು ಪ್ರೋತ್ಸಾಹವನ್ನೇ ನೆಚ್ಚಿಕೊಂಡು ಗುರು ಸಾಧಿಸಿದ್ದಾರೆ. ಗುರುರಾಜ್ ಒಂದು ರೀತಿಯಲ್ಲಿ ಸವಾಲಿನ ಬದುಕನ್ನೇ ಸ್ಪೂರ್ತಿಯಾಗಿಸಿಕೊಂಡವರು. ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಮುಗಿಸಿರುವ ಗುರುರಾಜ್ ಕಲಿಕೆಯಲ್ಲೂ ಮುಂದಿದ್ದ ವಿದ್ಯಾರ್ಥಿ. ಈಗ ಗುರು ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್ಗಳು
ಪ್ರಚಲಿತ ಪೋಸ್ಟ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನಮ್ಮ ಹೆಮ್ಮೆ ಗುರು ಅಣ್ಣ 💐💐💐💐💐💐💐
ಪ್ರತ್ಯುತ್ತರಅಳಿಸಿThank You.
ಅಳಿಸಿ