ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಭೀಮಾಕಾರದ ಈ ಬಾಳೆ ಗಿಡದಲ್ಲಿ ಒಂದೊಂದು ಹಣ್ಣಿನ ತೂಕ 3 ಕೆಜಿ!

ಪ್ರಕೃತಿಯೊಳಗೆ ಎಷ್ಟೋ ವಿಸ್ಮಯಕಾರಿ ಸಂಗತಿಗಳಿರುತ್ತವೆ. ನಿಸರ್ಗದ ಕೌತಕಗಳ ಸಂಗತಿಗಳು ಕೇಳಿದಾಗ ನಮ್ಮನ್ನು ನಿಬ್ಬೆರಗಾಗಿಸೋದಿದೆ. ನಿಸರ್ಗದ ಅಂಥ ಅದೆಷ್ಟೋ ಸಂಗತಿಗಳು ದೇಶದ ಮೂಲೆ ಮೂಲೆಗಳಲ್ಲಿವೆ. ಅವುಗಳಲ್ಲೊಂದು ಭೀಮಗಾತ್ರದ ಬಾಳೆ ಗಿಡಗಳು.

ನಮ್ಮೂರಿನಲ್ಲಿ ಬೆಳೆಯೋ ಬಾಳೆ ಗಿಡಗಳು ಬೃಹತ್ ಗಾತ್ರದ ನೂರಿನ್ನೂರು ಹಣ್ಣುಗಳನ್ನು ಕೊಟ್ಟ ದಾಖಲೆಗಳು ಬಹಳಷ್ಟು ಇವೆ. ಆದರೆ ಒಂದು ಬಾಳೆ ಗಿಡದ ಒಂದೇ ಹಣ್ಣು 2 ರಿಂದ 3 ಕೆಜಿ ತೂಗುತ್ತದೆ ಎಂದರೆ ಆ ಬಾಳೆ ಗಿಡ ಎಷ್ಟು ದೊಡ್ಡದಿರಬಹುದು ಊಹಿಸಿ. ಆದರೆ ಇಂಥ ಬಾಳೆ ಗಿಡಗಳು ಭೂಮಿಯಲ್ಲಿ ಈಗಲೂ ಇವೆ.

ಪಪುವಾ ನ್ಯೂ ಗಿನಿಯಾದಲ್ಲಿ ಬೃಹತ್ ಗಾತ್ರದ ಬಾಳೆ ಗಿಡಗಳು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿವೆ. ಇಲ್ಲಿನ ಬಾಳೆ ಗಿಡಗಳು ಭೀಮಾಕಾರದಲ್ಲಿರುತ್ತವೆ ಮತ್ತು ನಾವೆಲ್ಲಾ ಬೆರಗಾಗುವಷ್ಟು ಎತ್ತೆತ್ತರಕ್ಕೆ ಬೆಳೆಯುತ್ತವೆ. ‘ಮೂಸಾ ಇಂಜೆನ್ಸ್’ ಎಂದು ಕರೆಯಲಾಗುವ ಈ ಭೀಮಾಕಾರದ ಬಾಳೆ ಗಿಡಗಳು ಸಾಮಾನ್ಯವಾಗಿ ಸುಮಾರು 15 ಮೀಟರ್ (49 ಫೀಟ್) ಎತ್ತರಕ್ಕೆ ಬೆಳೆಯುತ್ತವೆ. ಇದರ ಎಲೆಗಳು ನೆಲದಿಂದ ಸುಮಾರು 20 ಮೀಟರ್ (66 ಫೀಟ್) ಎತ್ತರದಲ್ಲಿರುತ್ತವೆ.

ಈ ಬಾಳೆ ಗಿಡದಲ್ಲಿ ಒಂದೊಂದು ಹಣ್ಣು ಸುಮಾರು 18 ಸೆಂಟಿ ಮೀಟರ್ (7 ಇಂಚುಗಳು) ಉದ್ದಕ್ಕಿರುತ್ತವೆ. ಒಂದೇ ಹಣ್ಣು 1.5-3 ಕೆಜಿ ತೂಕವಿರುವುದೂ ಇದೆ. ಒಂದೇ ಗಿಡದಲ್ಲಿ ಇಂಥ ಬೃಹತ್ ಗಾತ್ರದ ಸುಮಾರು 300 ಬಾಳೆ ಹಣ್ಣುಗಳು ಬೆಳೆಯುತ್ತವೆ. ಎಲ್ಲಾ ಸಮಯದಲ್ಲೂ ಇಷ್ಟೇ ದೊಡ್ಡ ಹಣ್ಣುಗಳು ಮತ್ತು ಇಷ್ಟು ಸಂಖ್ಯೆಯ ಹಣ್ಣುಗಳು ಇರುತ್ತವೆ ಎಂದೇನೂ ಅಲ್ಲ. ಆದರೆ ಸಾಮಾನ್ಯ ಬಾಳೆ ಹಣ್ಣುಗಳ ಗಾತ್ರಕ್ಕೆ ಈ ಬಾಳೆಹಣ್ಣುಗಳನ್ನು ಹೋಲಿಸಿದರೆ, ಸಾಮಾನ್ಯ ಬಾಳೆ ಹಣ್ಣುಗಳ ಸಂಖ್ಯೆಗಳಿಗೆ ಹೋಲಿಸಿದರೆ ಇವು ಸಾಕಷ್ಟು ದೊಡ್ಡದಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ.

ಕೆಲವೊಂದು ವರದಿಗಳ ಪ್ರಕಾರ, ಪಪುವಾ ನ್ಯೂ ಗಿನಿಯಾದಲ್ಲಿ ಬೆಳೆಯುವ ಈ ಭೀಮ ಗಾತ್ರದ ಬಾಳೆ ಗಿಡಗಳು 30 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ ಎನ್ನಲಾಗುತ್ತದೆ. ಆದರೆ ಈ ಹೇಳಿಕೆಗಳನ್ನು ವೈಜ್ಞಾನಿಕವಾಗಿ ಒಪ್ಪಲು ಸಾಧ್ಯವಿಲ್ಲ ಎನ್ನುವವರೂ ಇದ್ದಾರೆ. ಹಾಗಂತ, ಭೀಮ ಗಾತ್ರದ ಬಾಳೆ ಗಿಡಗಳು ಇರುವುದಂತೂ ಸುಳ್ಳಲ್ಲ. ಈ ಬಾಳೆ ಗಿಡಗಳ ಬುಡದಲ್ಲಿ ನಿಂತರೆ ನಾವು ಪುಟಾಣಿ ಪಿಳ್ಳೆಯಾಗಿ ಕಾಣುತ್ತೇವೆ ಅನ್ನೋದೂ ಅಷ್ಟೇ ಸತ್ಯ. ಒಟ್ಟಿನಲ್ಲಿ ಈ ಜಗ ಸೋಜಿಗವಲ್ಲವೆ?

-ಸದಾ ಸಕಲೇಶಪುರ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು