ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಟ್ರೇನು ಕಿಟಕಿಯಲ್ಲಿ ಸಿಕ್ಕವಳು, ಹಿತವಾಗಿ ನಕ್ಕವಳು (ಭಾವ-ಬೆಸುಗೆ)

ರ್ನಾಕುಲಂ ಜಂಕ್ಷನ್‌ನಿಂದ ಹೊರಟಿದ್ದ ಆ Trivandrum-Mangalore Express ಟ್ರೇನು ಅದಾವುದೋ ತಿರುವಿನಲ್ಲಿ ಶಿಳ್ಳೆ ಹಾಕುವಾಗ ಹೆಡ್‌ಫೋನ್‌ ಕಿವಿಗೆಟ್ಟಿಕೊಂಡಿದ್ದ ನಾನು ಟ್ರೇನು ಡೋರಿನ ಮೇಲೆ ನಿಂತುಕೊಂಡು ಹಿಂದೆ ಸರಿದು ಹೋಗುತ್ತಿದ್ದ ದೃಶ್ಯಾವಳಿಗಳನ್ನು ಕಣ್ಣ ಕೆಮರಾದಲ್ಲೇ ಸೆರೆಹಿಡಿಯುತ್ತ ನಿಂತಿದ್ದೆ. ಟ್ರೇನು ಪ್ರಯಾಣ ಮಾಡುವಾಗಿನ ನನ್ನ ಮಾಮೂಲು ಹುಚ್ಚದು. ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಹೀಗೆ ಟ್ರೇನ್ ಡೋರಿನ ಇಕ್ಕೆಲಗಳಲ್ಲಿರುವ ಹೋಲ್ಡರಿಗೆ ಕೈ ಅಂಟಿಸಿಕೊಂಡು ನಿಂತುಬಿಡುವ ಈ ಹುಚ್ಚು ಅದ್ಯಾವತ್ತು ನನ್ನ ಅಡರಿಕೊಂಡುಬಿಟ್ಟಿತ್ತೋ ಗೊತ್ತಿಲ್ಲ. ಅರೆ ಬರೆ ಬೆಳಕು ಚೆಲ್ಲಿದ್ದ ಆ ಮುಂಜಾವಿನ ಹಲ್ಲು ಕಟಕಟಿಸುವ ಚಳಿಯನ್ನೂ ಲೆಕ್ಕಿಸದೆ ನಿಂತುಕೊಂಡು ಹಿತವಾಗಿ ಮುಖಕ್ಕೆ ರಾಚುತಿದ್ದ ತಂಗಾಳಿಯನ್ನು ಆಹ್ಲಾದಿಸುತ್ತ ಕಣ್ಣೆದುರಿಂದ ಕುಣಿದು ಹೋಗುತ್ತಿದ್ದ ಮರಗಿಡಗಳು, ಬೆಟ್ಟ ಗುಡ್ಡಗಳು, ಹೆಬ್ಬಂಡೆಗಳು, ಕುರುಚಲು ಪೊದೆಗಳು, ವಿಶಾಲ ಸರೋವರಗಳು, ಬಟಾಬಯಲುಗಳನ್ನೆಲ್ಲ ಕಣ್ಣಲ್ಲಿ ತುರುಕಿಕೊಳ್ಳುತ್ತ ತಣ್ಣಗೆ ಹುಂಬನಂತೆ ನಿತುಬಿಟ್ಟಿದ್ದೆ. ನಡು ನಡುವೆ ಸ್ವಚ್ಛ ಭಾರತ್ ಬೋರ್ಡುಗಳೂ ಎದುರಾದವು. ಕಸದೊಂದಿಗೆ ರಾಜಿ ಮಾಡಿಕೊಂಡಿದ್ದ ಊರುಗಳೂ ದಾಟಿಹೋದವು. ಒಮ್ಮೆ ಶುದ್ಧ ಹಸಿರು. ಮತ್ತೊಮ್ಮೆ ಬಣ್ಣ ಮಾಸಿದ ಮನೆಗಳು, ಕಟ್ಟಡಗಳು, ರೈಲಿನ ವೇಗಕ್ಕೆ ಡ್ಯಾನ್ಸು ಮಾಡುತ್ತ ಮತ್ತೆ ಮತ್ತೆ ಕರಗಿ ಕಣ್ಮರೆಯಾಗುತ್ತಲೇ ಇದ್ದವು. 


ಬರಬರುತ್ತ ಮುಸುಕಿದ್ದ ಇಬ್ಬನಿ ಮಾಯವಾಗಿ ಇನ್ನಷ್ಟು ದೂರದಲ್ಲಿ ಕಣ್ಣು ಮರೆಸಿಕೊಂಡಿದ್ದ ಊರು ಕೇರಿಗಳೂ ರೈಲಿನೊಂದಿಗಿನ ಡ್ಯಾನ್ಸಿನಲ್ಲಿ ಸೇರಿಕೊಂಡು ಮತ್ತೆ ಅಸ್ಪಷ್ಟವಾಗತೊಡಗಿದ್ದವು. ಪ್ರತೀ ಜಂಕ್ಷನ್ ಬಂದಾಗಲೂ ಶಿಳ್ಳೆ ಹೊಡೆಯುವ ಚಾಳಿ ಹತ್ತಿಸಿಕೊಂಡಿದ್ದ ಟ್ರೇನು ಈಗಲೂ ಯಾವುದೋ ಜಂಕ್ಷನ್ನಲ್ಲಿ ಧೀರ್ಘವಾಗಿ ಒಂದು ಶಿಳ್ಳೆ ಹಾಕಿ ಧಡಕ್ಕನೆ ನಿಂತುಬಿಟ್ಟಿತ್ತು. ಟ್ರೇನು ಡೋರುಗಳಿದ್ದೆಡೆಯಿಂದ ಹತ್ತಾರು ಪ್ರಯಾಣಿಕರು ಹತ್ತಿಳಿದರು. ಅವರೊಂದಿಗೆ 'ಚಾಯ್ ಗರಮ್ ಚಾಯ್..' ಎನ್ನುತ ಇನ್ನೊಂದಿಬ್ಬರು ಚಾಯ್‌ವಾಲರೂ ಹತ್ತಿ ಇದು ನಮ್ದೇ ಅಡ್ಡ ಅನೋಹಾಗೆ ಬೋಗಿಯ ತುಂಬೆಲ್ಲ ಓಡಾಡಿದರು. ಟ್ರೇನು ಮತ್ತೊಮ್ಮೆ ಶಿಳ್ಳೆ ಹಾಕಿ ತೆವಳೋಕೆ ಶುರುವಿಟ್ಟಿತ್ತು. ನಾನೀಗಲೂ ಟ್ರೇನು ಡೋರಿನ ಕೈ ಹಿಡಿದು ನಿಂತಿದ್ದೆ. ಪಕ್ಕದ ಸ್ಲೀಪರ್ ಕೋಚ್‌ಕೋಚ್ಲ್ಲಿದ್ದ ಚೆಲುವೆಯೊಬ್ಬಳು ಟ್ರೇನು ಕಿಟಕಿಯಿಂದ ಕತ್ತು ಚಾಚಿಬಿಟ್ಟಳು! 

ಕಡುಗಪ್ಪು ಕೂದಲು, ನೀಟಾಗಿ ಗೆರೆ ಎಳೆದಹಾಗಿನ ಹುಬ್ಬು, ಬಟ್ಟಲು ಕಂಗಳು, ತಿಳಿ ಗುಲಾಬಿ ಬಣ್ಣದ ತುಟಿಗಳು. 'ಆಹ! ಇಂಥೊಬ್ಬಳು ಸುಂದರಿ ಸಿಕ್ಕಿದ್ದರೆ ಬೆಳಗ್ಗಿನಿಂದ ರಾತ್ರಿಯತನಕವೂ ಇವಳ ಮುಖಕ್ಕೆ ಮುಖ ಕೊಟ್ಟು, ಆ ನಂದಿಬಟ್ಟಲು ಹೂವಿನ ಕಂಗಳನ್ನೂ, ಹವಳದ ತುಟಿಗಳನ್ನೂ ನೋಡುತ್ತಲೇ ಸಾಯುತ್ತಿದ್ದೆನಲ್ಲಾ ಶಿವಾ..' ಅಂತ ಮನಸ್ಸೊಮ್ಮೆ ರಾಗ ಹಾಕಿತು. ಆಕೆ ಮಾತ್ರ ನಿರುಮ್ಮಳವಾಗಿ ಪೂಸಿಹೋಗುತ್ತಿದ್ದ ಆ ತಂಗಾಳಿಗೇ ಮುಖ ಅದ್ದುತ್ತಾ ಕಾಣದ ಸುಖವನ್ನು ಕಣ್ಮುಚ್ಚಿ ಆಹ್ಲಾದಿಸುತ್ತಿದ್ದಳು. ನಿಜಕ್ಕೂ ನಿಂಗೆ ತಂಗಾಳಿಯ ಸುಂಯ್ ಸಂಗೀತ, ಅದರ ನಿರ್ಮಲ ಸ್ಪರ್ಶ ಇಷ್ಟವಾ? ಮನಸೊಳಗೆ ಮೆಲ್ಲಗೆ ಬಿರಿವ ಪ್ರೇಮ ಗುಲಾಬಿಯ ಅಸ್ಪಷ್ಟಸ್ವರ, ಆ ಪ್ರೀತಿಯ ಕಚಗುಳಿ ಇನ್ನೂ ಸೊಗಸು ಗೊತ್ತೇನೆ ಹುಡುಗಿ ಅಂತ ಅವಳಲ್ಲಿ ಕೇ(ಹೇ)ಳಿ ಬಿಡಬೇಕೆಂದೂ ಅನಿಸಿತು. ಬೇಡ, ನೀ ಹೀಗೇ ಪ್ರಕೃತಿ ಸೊಬಗಿಗೆ ಮೈ ಮರೆತು ನಿಲ್ಲು. ನಾನು ನಿನ್ನ ದುಂಡು ಮಲ್ಲಿಗೆಯ ಮೊಗವನ್ನು ಕಣ್ಣಲ್ಲೇ ಮುಕ್ಕುತ್ತ ನಿಂತುಬಿಡುತ್ತೇನೆ ಸಾಕು ಅಂತ ಮನಸ್ಸಲ್ಲೇ ಗುನುಗಿಕೊಂಡು ಅವಳನ್ನೇ ಕಣ್ಣಲ್ಲಿ ತುಂಬಿಕೊಳ್ಳುತ್ತಾ ನಿಂತುಬಿಟ್ಟೆ. ಕಂಗಳು ಸೀದಾ ಅವಳ ಬಟ್ಟಲು ಕಣ್ಣಂಚಿನ ಕಾಡಿಗೆಯ ಸೊಬಗಿಗೆ ಬೆಸುಗೆ ಬಿದ್ದಿತ್ತು. ಅವಳ ತಿಳಿ ಶುಭ್ರ ಕಂಗಳ ಚೆಲುವನ್ನೂ ಲೈಟ್ ಪಿಂಕ್ ಲಿಫ್‌ಸ್ಟಿಕ್ ಮೆಲುವಾಗಿ ಬಳಿದಿದ್ದ ಆ ಎಳೆತುಟಿಗಳನ್ನೂ ಕಣ್ಣಲ್ಲೇ ಸವೆಯುತ್ತ ನಾನು ರಸಿಕ ಮೂರ್ತಿಯಾಗಿಬಿಟ್ಟೆ. 

ಆ ಹುಡುಗಿ ಮೆಲ್ಲನೆ ಕಣ್ಣುತೆರೆದು ನನ್ನತ್ತ ತಿರುಗುವಾಗಲೂ ನಾನು ಆಕೆಯ ಸ್ನಿಗ್ಧ ತುಟಿಗಳ ಚೆಲುವಿನೊಳಗೆ ಕರಗಿಹೋಗಿದ್ದನ್ನು ಕಂಡು ಆಕೆ ಗಾಬರಿಗೊಂಡಳು ಕಾಣುತ್ತೆ. ಸರಕ್ಕನೆ ಕತ್ತು ಸರಿಸಿಕೊಂಡಳು. ಆ ಚೆಲುವಾದ ವದನಾರವಿಂದ ಒಮ್ಮಿಂದೊಮ್ಮೆಲೆ ಮಾಯವಾದಾಗ ನಾನೂ ಗಾಬರಿಗೆ ಬಿದ್ದೆ. ತುಸು ಹೊತ್ತಿನ ಬಳಿಕ ಕಳ್ಳಗಣ್ಣುಗಳಿಂದ ಆಕೆಯೇ ಮತ್ತೆ ಮೆಲ್ಲನೆ ನಾನಿದ್ದ ಡೋರಿನೆಡೆಗೆ ಇಣುಕಿದಾಗ ನನ್ನಲ್ಲಿ ಸತ್ತು ಹೋಗುವಷ್ಟು ಸಂಭ್ರಮ. ಇಡೀ ಬೋಗಿಯೊಳಗೊಂದು ಸ್ವರ್ಗ ಸೃಷ್ಟಿಯಾಗಿ ಅಲ್ಲಿ ಪುಷ್ಪ ವೃಷ್ಟಿ ತಂದಂತಿತ್ತು ಅವಳ ಇಣುಕು ನೋಟ, ಆ ನಾಚಿಕೆಯ ಲಾಸ್ಯ. ಇತ್ತ ಕಿವಿಗೇರಿಸಿಕೊಂಡಿದ್ದ ಹೆಡ್‌ಫೋನಿನೊಳಗೂ ಮೈಕಲ್ ಜಾಕ್ಸನ್‌ನ ಬಿಲ್ಲಿಜೀನ್ ಸಾಂಗ್ ಬದಲಾಗಿ 'ಪಿಕೆ'ಯ
'ಈ ತೋ ವೇಸ್ಟ್ ಆಫ್ ಟೈಮ್..
ಈ ಲವ್ ಇಸ್ ವೇಸ್ಟ್ ಆಫ್ ಟೈಮ್..' ಗೀತೆ ಶುರುವಾಗಿಹೋಗಿತ್ತು!

ಎತ್ತಲೋ ಮುಳುಗಿ ಹೋಗಿದ್ದ ನಾನು ಧಡಕ್ಕನೆ ಭೂಮಿಗುರುಳಿಸಿದ್ದು ಟಿಸಿ ಬಂದು ಮೈದವಿದಾಗಲೆ. ಆತ 'ಟಿಕೆಟ್ ದೀಜಿಯೆ ಸಾರ್' ಅಂದಾಗ ಕಿಸೆಯೆಲ್ಲಾ ತಡಕಾಗಿ ಜೇಬಿನ ಮೂಲೆಯಲ್ಲೆಲ್ಲೋ ಮುದುಡಿ ಕುಳಿತಿದ್ದ ಚೀಟಿಯನ್ನು ಹಲ್ಲು ಕಿಸಿಯುತ್ತ ಅವನ ಮುಂದೆ ಹಿಡಿದೆ. ಟಿಸಿಯೊಮ್ಮೆ ನನ್ನನ್ನು ವಿಚಿತ್ರವಾಗಿ ದಿಟ್ಟಿಸಿ ತನ್ನ ಎಂಟ್ರಿ ಪ್ಯಾಡ್ ತೆಗೆದು ಟಿಕೆಟ್ ಎಂಟ್ರಿಮಾಡಿಕೊಂಡು ಮುಂದುವರೆದ. ಆತ ಅತ್ತ ಸರಿದದ್ದೇ ತಡ, ನಾನು ಮತ್ತೆ ಕಿವಿಗೆ ಹೆಡ್ಫೋನ್ ತುರುಕಿಕೊಂಡು ಅವಳಿದ್ದ ಕಿಟಕಿಯೆಡೆಗೆ ಇಣುಕಿದೆ. ಅವಳಿರಲಿಲ್ಲ. ನಾಲ್ಕಾರು ಬಾರಿ ಬರೀ ಕಿಟಕಿ ಸರಳುಗಳ ದರ್ಶನವಾದಾಗ ಮನಸ್ಸು ಚೊಂಗು ಹಿಡಿದಂತಾಯಿತು. ಎಂಥದ್ದೋ ಚಡಪಡಿಕೆಯಿಂದಲೇ ಮತ್ತೆ ಹತ್ತಾರುಬಾರಿ ಅವಳಿದ್ದ ಟ್ರೇನು ಕಿಟಕಿಯೆಡೆಗೆ ಆಸೆಗಣ್ಣಲ್ಲಿ ಇಣುಕುವಾಗಲೂ ಅದೇ ಕಿಟಕಿ ಸರಳುಗಳು ಅಣಕಿಸಿದವು. 

ಒಂದು ಕ್ಷಣ ಏನೋ ಯೋಚಿಸಿದವನು ಮತ್ತೆ ಚಾಯ ಕುಡಿಯಲಿಕ್ಕೆ ಅಸಲು ಮನಸ್ಸು ಇಲ್ಲದಿದ್ದರೂ ಚಾಯ್ವಾಲಾನನ್ನು ಹಿಂಬಾಲಿಸುತ್ತಾ ಸೀದಾ ಅವಳಿದ್ದ ಸ್ಲೀಪರ್ ಕೋಚ್ ಎರಡರತ್ತ ನಡೆದೆ. ಹಾಗೆ ಸಾಗುವಾಗ ಆಕೆ ಕುಳಿತಿದ್ದ ಸೀಟಿನೆಡೆಗೆ ಕಣ್ಣುಹರಿಸಲು ಅಳುಕಾದರೂ ಸಂಭಾಳಿಸಿಕೊಂಡು ಮೆಲ್ಲಗೆ ಅವಳೆಡೆಗೆ ಕಣ್ಣು ತಿರುಗಿಸಿದೆ. ವೆಜ್ ಪಲಾವಿನ ಬಾಕ್ಸನ್ನು ಮುಂದಿರಿಸಿಕೊಂಡು ಚಹಾ ಹೀರುತ್ತಿದ್ದ ಅವಳೂ ವಾರೆಗಣ್ಣಲ್ಲಿ ನನ್ನನ್ನೊಮ್ಮೆ ದೃಷ್ಟಿಸಿದಳು. ತಿಳಿ ನೀಲಿ ಬಣ್ಣದ ಚೂಡೀದಾರ್ ತುಂಬೆಲ್ಲ ಕಡುನೀಲಿ ಮೊಗ್ಗುಗಳ ಚಿತ್ತಾರ. ಕಾಲುಗಳಿಗೆ ಗೆಜ್ಜೆಯ ಮೆರಗು. ಥೇಟ್ ಅಪ್ಸರೆಯಂತೆ ಕಾಣುತ್ತಿದ್ದಳು. ಚಹಾದವನಿಂದ ಆಗತಾನೆ ಈಸಿಕೊಂಡಿದ್ದ ಚಹಾದ ಗ್ಲಾಸಿಗೆ ಮುತ್ತಿಕ್ಕುವ ರೀತಿಯ ಆ ಭಂಗಿಯಲ್ಲಿ ಆಕೆ, ನಾನು ಹಿಂದಿನ ದಿನ ಕೊಟ್ಟಾಯಂ ಪೇಟೆ ಸುತ್ತಲು ಹೋದವನು ಅಲ್ಲಿನ ಲೂಲು ಇಂಟರ್‌ನ್ಯಾಷನಲ್ ಮಾಲ್‌ನ ಡ್ರೆಸ್ ಮೆಟೀರಿಯಲ್ಸ್ ಶಾಪಿನಲ್ಲಿ ಕಂಡು ಕಣ್ಣರಳಿಸಿದ್ದ ಆ ಚೆಲುವಾದ ಪುತ್ಥಳಿಕೆಗಿಂತಲೂ ಮುದ್ದಾಗೇ ಇದ್ದಾಳೆ ಅನ್ನಿಸಿತು. ಕಣ್ಣರಳಿಸಿ ಅವಳನ್ನೇ ದಿಟ್ಟಿಸುತ್ತ ಮತ್ತೆ ಕಲ್ಲಾಗಿಬಿಟ್ಟೆ. ಆಕೆಯೊಮ್ಮೆ ವಾರೆಗಣ್ಣಲ್ಲಿ ನನ್ನತ್ತ ನೋಡಿ ನಕ್ಕಳು. ಪಕ್ಕದಲ್ಲೇ ಕುಳಿತುಕೊಂಡಿದ್ದ ಅವಳ ಅಪ್ಪ ಅಮ್ಮ ನನ್ನನ್ನೇ ಕೆಕ್ಕರಿಸಿದ್ದರ ಅರಿವಾಗಿ ದಢಕ್ಕನೆ ಎಚ್ಚೆತ್ತುಕೊಂಡು ಬಿರಬಿರನೆ ಮುಂದಕ್ಕೆ ಹೆಜ್ಜೆಯಿಟ್ಟೆ. ನನ್ನ ಪರದಾಟ ಅವಳಿಗೆ ಗಮ್ಮತ್ತು ಎನಿಸಿತೋ ಏನೋ. ಮತ್ತೊಮ್ಮೆ ಮುಸಿ ಮುಸಿ ನಕ್ಕಳು.

ಚಾಯ್‌ವಾಲನನ್ನು ಹುಡುಕಾಡುವ ನಾಟಕವಾಡುತ್ತಾ ಟ್ರೇನಿನುದ್ದಕ್ಕೆ ನಡೆಯುತ್ತಿದ್ದ ನನ್ನೆದೆ ಒಂದೇಸಮನೆ ಬಡಿದುಕೊಳ್ಳುತ್ತಿತು. ದೇವರೇ, ವಾಪಸ್ಸು ನನ್ನ ಬೋಗಿಗೆ ಹೋಗುವಾಗ ಆಕೆಯ ಹೆತ್ತವರು ಅಡ್ಡಗಟ್ಟಿ ನಂಗೆ ಹಿಗ್ಗಾಮುಗ್ಗಾ ಗುಮ್ಮಿದ್ರೆ?! ಎಂದೆಲ್ಲಾ ಪುಕ್ಕಲು ಮನಸ್ಸು ಕುಂಯ್ಗುಟ್ಟಿತು. ಒಂದು ಧೀರ್ಘ ಉಸಿರನ್ನು ಎಳೆದುಕೊಂಡು ಚಹಾದವನಿಗಾಗಿ ಹುಡುಕಾಡಿದೆ. ಬೋಗಿ ಬೋಗಿಗಳಲ್ಲಿ ಹುಡುಕಾಡುವಾಗ ಟ್ರೇನು ಡೋರಿನ ಬಳಿ ಇನ್ನೇನು ಇಳಿದು ಹೋಗಲಿಕ್ಕೆಂದು ಅಣಿಯಾಗಿದ್ದ ಚಹಾವಾಲ ಕಾಣಿಸಿದ. ಓಡಿಹೋಗಿ ಅವನ ಬಳಿಯಲ್ಲಿ ಹಲ್ಲು ಕಿಸಿದು ಭಯ್ಯಾ ಏಕ್ ಗ್ಲಾಸ್ ಚಾಯ್ ಅಂದೆ. ರೈಲಿನ ಮೆಲು ಕುಲುಕಾಟದ ಜೊತೆಗೆ ಸಣ್ಣದಾಗಿ ದೇಹವೂ ಕಂಪಿಸುತ್ತಿದ್ದರಿಂದ ಚಹಾದವನಿಂದ ಗ್ಲಾಸು ಈಸಿಕೊಳ್ಳುವಾಗ ನಾಲ್ಕು ಡ್ರಾಪು ಚಹಾವನ್ನು ಟ್ರೇನು ನೆಲಕ್ಕೂ ಕುಡಿಸಿದ್ದಾಗಿತ್ತು! 

ಗಲಗಲ ಅಲುಗಾಡುತ್ತಿದ್ದ ಚಹಾದ ಗ್ಲಾಸನ್ನು ಹಿಡಿದು ಮದುಮಗಳ ಹಾಗೆ ನಡೆಯುತ್ತಿದ್ದ ನಾನು ಟ್ರೇನಿನ ಮಂದ ನೃತ್ಯಕ್ಕೆ ತುಳುಕಾಡುತ್ತಿದ್ದ ಗ್ಲಾಸಿಗೆ ಪ್ರತಿಕ್ರಿಯಿಸುತ್ತ ಒಮ್ಮೆ ನಿಲ್ಲುತ್ತಲೂ ಒಮ್ಮೆ ನಡೆಯುತ್ತಲೂ ಸಾಗುತ್ತಿದ್ದೆ. ಆಕೆಯಿದ್ದ ಸ್ಲೀಪರ್ ಕೋಚ್ ಹತ್ತಿರ ಬರುತ್ತಲೇ ಹಾರ್ಟುಬೀಟಿನ ಸ್ಪೀಡು ಪೀಕಿಗೇರಿತ್ತು. ಅವಳ ಅಪ್ಪ ದೊಡ್ಡ ಧ್ವನಿಯಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ. ಅವಳಮ್ಮನೂ ಮಾತಿನಲ್ಲಿ ಮುಳುಗಿದ್ದಳು. ಅವಳತ್ತ ನೋಡುವುದೋ ಬೇಡವೋ ಎಂಬ ದ್ವಂದದಿಂದಲೇ ನಾನು ಕಣ್ಣುತಿರುಗಿಸುವಾಗ ಅವಳೂ ನನ್ನತ್ತ ದೃಷ್ಟಿಹಾಕಿದ್ದಳು. ಕೊಂಚ ಗಂಭೀರಳಾಗಿದ್ದಂತೆ ತೋರಿತು. ಏನಾದರೂ ಎಡವಟ್ಟಾಗಿಬಿಟ್ಟರೆ ಮತ್ತೆ ಬಲಭೀಮನಹಾಗೆ ಮೀಸೆ ಬಿಟ್ಟಿದ್ದ ಅವಳಪ್ಪನ ಕೈಯಲ್ಲಿ ಬಿಟ್ಟೀ ಗೂಸತಿನ್ನುವ ಗ್ರಹಚಾರ ಯಾವನಿಗೆ ಬೇಕು ಅಂತ ಬೇಗನೆ ಅಲ್ಲಿಂದ ಕಾಲ್ಕಿತ್ತೆ. ಮತ್ತದೇ ಟ್ರೇನು ಡೋರಿನ ಹೋಲ್ಡರನ್ನು ಬಿಗಿಹಿಡಿದು ಚಹಾ ಹೀರುತ್ತ ಅವಳಿದ್ದ ಕಿಟಕಿಯತ್ತ ದಿಟ್ಟಿಸಿದೆ. ಆಕೆ ಕಾಣಿಸಲಿಲ್ಲ. ಮತ್ತೆ ಕಾಣಿಸುವುದೂ ಇಲ್ಲವೇನೋ ಅಂತ ಹೇಳಲಾಗದ ಕಳವಳ ಶುರುವಾಯಿತು ನನ್ನಲ್ಲಿ. ಗಾಳಿಗೆ ಮೈ ಅದ್ದಿ ತಣ್ಣಗಾಗಿದ್ದ ಚಹಾವನ್ನು ಅನ್ಯ ಮನಸ್ಕನಾಗಿ ಒಳಗೆಳೆದುಕೊಳ್ಳುತ್ತಿದ್ದನಷ್ಟೆ. ಚಹಾದ ತಾಜಾತನವಿರಲಿ ಅದರ ರುಚಿಯೂ ನನ್ನ ನಾಲಿಗೆಗೆ ತಾಗಿದಂತಿರಲಿಲ್ಲ. 'ಎಂಥಾ ಹುಡುಗಿಯರಪ್ಪಾ.. ಸತಾಯಿಸುವುದರಲ್ಲಿ ಇವರದ್ದೇ ಎತ್ತಿದ ಕೈ ಥತ್ತರಿಕೆ' ಅಂದುಕೊಂಡವನೂ ಮತ್ತೆ ಅವಳೇಕೆ ನನ್ನೆಡೆಗೆ ನೋಡಬೇಕು? ನೋಡಲಿ ಅಂತ ನಾನಾದರೂ ಯಾಕೆ ಬಯಸಬೇಕು. ಆಕೆಯೇನಾದರೂ ಪರಿಚಿತಳೆ? ಅಥವಾ ಪರಿಚಯವಿಲ್ಲದೆಯೂ ಎದೆಯ ಗೋಪುರದಲ್ಲಿ ಕೂರ ಹೊರಟ ಮಾಯಗಾತಿಯೇ? ಯಾರೀಕೆ? ಅರೆರೆ! ನಾನೇಕೆ ಒಂದು ನೋಟದಲ್ಲೇ ಅವಳಿಗೆ ಅ(ಗ)ಂಟುಬಿದ್ದಿದ್ದೇನೆ? ಅವಳು ನೋಡಿದರೆ ಅಥವಾ ನೋಡದೆ ಕೂತರೆ ನಾನೇಕೆ ಫೀಲಾಗಬೇಕು? ಎಂಬಿತ್ಯಾದಿ ಪ್ರಶ್ನೆಗಳು ತನ್ನೊಳಗೇ ಹುಟ್ಟಿ ಮಾಯವಾದವು. ಯೋಚನಾ ಮಗ್ನನಾಗಿದ್ದ ನನ್ನ ಕೈಯಿಂದ ಚಹಾದ ಗ್ಲಾಸು ಜಾರಿ ರೈಲಿನಿಂದ ಹೊರಗೆ ಎಗರುವ ಹೊತ್ತು ಕಣ್ಣುಗಳು ಮಾತ್ರ ಅವಳಿದ್ದೆಡೆಗಿನ ಕಿಟಕಿಗಳಿಗೆ ಬೆಸುಗೆ ಬಿದ್ದಂತೆ ನೆಟ್ಟುಹೋಗಿದ್ದವು. ತುಟಿಯಲೊಂದು ಮಂದಹಾಸ ಚಿಮ್ಮತ್ತ ಆಕೆ ಮತ್ತೆ ಇಣುಕಿದಳು! 

ನಾನು ಮತ್ತೆ ಮುದ್ದುಮರಿಯ ಹಾಗಿದ್ದ ಅವಳ ಮುದ್ದು ಮೂತಿಯನ್ನೇ ಮೆಲ್ಲುತ್ತಾ ಮೈ ಮರೆತುಬಿಟ್ಟಿದ್ದೆ. ಎಚ್ಚರಗೊಂಡಿದ್ದು ಸ್ಟಾಪು ಬಂತೆಂದು ಸ್ನೇಹಿತ ಮೈಕುಲುಕಿ ಎಚ್ಚರಿಸಿದಾಗಲೇ. ನಾನು ಹೌಹಾರಿ ಎಚ್ಚರಗೊಳ್ಳುವ ಹೊತ್ತು ಟ್ರೇನು ಮಂಗಳೂರು ಸೆಂಟ್ರಲ್ ಸ್ಟೇಶನ್ನೊಳಗೆ ತೆವಳುತ್ತಿತ್ತು. ಶಕ್ತಿಗುಂದಿದವನಂತೆ ಲಗೇಜುಗಳನ್ನು ಎತ್ತಿಕೊಂಡು ನಾನು ಟ್ರೇನು ಇಳಿಯೋಕೆ ಮುನ್ನ ಆಕೆಯೆಡೆಗೊಂದು ನಿರ್ಲಿಪ್ತ ನೋಟ ಹರಿಸಿದೆ. ಆ ಮುದ್ದು ಮುಖದಲ್ಲೊಂದು ಭಾವುಕತೆಯ ಎಳೆ ಸುಳಿದಾಡುತ್ತಿದೆಯೇ ಅನ್ನಿಸಿ ಕಂಗಳೇಕೋ ಮಸುಕು ಮಸುಕಾದವು. ರೈಲು ದೊಡ್ಡದಾಗಿ ಒಂದು ಶಿಳ್ಳೆ ಹಾಕಿ ಚಲಿಸುವಾಗ ಆಕೆ ಇಣುಕಿ ನಕ್ಕ ಅದೇ ಕಿಟಕಿಯತ್ತ ಮತ್ತೆ ನೋಡೋಕೆ ಧೈರ್ಯ ಸಾಲಲಿಲ್ಲ. ನಾನು ಪ್ಲ್ಯಾಟ್‌ಫಾರ್ಮ್‌ನಿಂದೀಚೆಗೆ ಸುಮ್ಮನೆ ಹೆಜ್ಜೆ ಕಿತ್ತಿಡುವಾಗ ಅದೇಕೋ ಅವಳೂ ಕಣ್ಣು ಹನಿಸಿಕೊಂಡು ನನ್ನತ್ತಲೇ ದಿಟ್ಟಿಸುತ್ತಿದ್ದಾಳೆ ಅನ್ನಿಸುತ್ತಿತ್ತು..

-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು