ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕ್ರಿಕೆಟ್ ಸಲುವಾಗಿ ರಾಷ್ಟ್ರ ಬದಲಾಯಿಸಿಕೊಂಡ 10 ಜನಪ್ರಿಯ ಕ್ರಿಕೆಟರ್ ಗಳಿವರು!
ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಇಷ್ಟಪಡುವ ಕ್ರೀಡೆಯಲ್ಲಿ ಕ್ರಿಕೆಟ್ ಗೆ ಅಗ್ರ ಸ್ಥಾನವಿದೆ. ಹಲವಾರು ರಾಷ್ಟ್ರಗಳಲ್ಲಿ ಆ ದೇಶದ ಪ್ರಮುಖ ಆದಾಯ ತರುವ ಕ್ರೀಡೆಯಾಗಿ ಕ್ರಿಕೆಟ್ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ನೈಜೀರಿಯಾ, ಜಪಾನ್, ಥೈಲ್ಯಾಂಡ್ ನಂತ ಹಲವು ರಾಷ್ಟ್ರಗಳು ಕ್ರಿಕೆಟ್ ಗೆ ಮನ್ನಣೆ ನೀಡುತ್ತಿವೆ, ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿವೆ.
ಕ್ರಿಕೆಟ್ ಆಡುವ ದೇಶಗಳಲ್ಲಿ ಎರಡು ವಿಧಗಳಿವೆ. ಮೊದಲನೇ ಗುಂಪು ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರಗಳು. ಈ ಗುಂಪಿನಲ್ಲಿರುವ ರಾಷ್ಟ್ರಗಳಲ್ಲಿ ಸರಿಯಾದ ಕ್ರಿಕೆಟ್ ರಚನೆಗಳಿರುತ್ತವೆ ಮತ್ತು ಈ ದೇಶಗಳಲ್ಲಿ ಹಲವಾರು ಪ್ರತಿಭಾನ್ವಿತ ಆಟಗಾರರಿರುತ್ತಾರೆ. ಇನ್ನೊಂದು ಕ್ರಿಕೆಟ್ ಆಡುವ ದೇಶಗಳ ಗುಂಪೆಂದರೆ ಐಸಿಸಿ ಸಹ ಸದಸ್ಯ ರಾಷ್ಟ್ರಗಳು. ಈ ದೇಶಗಳಲ್ಲಿ ಕ್ರಿಕೆಟ್ ಬೆಳೆಯತೊಡಗಿವೆ. ಹಲವಾರು ರಾಷ್ಟ್ರಗಳು ಈ ಗುಂಪಿನಲ್ಲಿವೆ.
ಕ್ರಿಕೆಟ್ ಆಡುವ ದೇಶಗಳಲ್ಲಿ ಎರಡು ಗುಂಪುಗಳಿರುವ ಕಾರಣದಿಂದಲೇ ಉತ್ತಮ ಅವಕಾಶ ಅರಸಿ ಕ್ರಿಕೆಟ್ ಕಾರಣಕ್ಕಾಗಿಯೇ ದೇಶ ಬದಲಾಯಿಸಿಕೊಂಡ ಒಂದಷ್ಟು ಕ್ರಿಕೆಟಿಗರಿದ್ದಾರೆ. ಅಚ್ಚರಿಯೆಂದರೆ ಈಗ ಸಕ್ರಿಯವಾಗಿರುವ ಈ ಕ್ರಿಕೆಟರ್ ಗಳಲ್ಲಿ ಜನಪ್ರಿಯ ಆಟಗಾರರೇ ಹೆಚ್ಚಿದ್ದಾರೆ.
10. ಕೋರಿ ಆ್ಯಂಡರ್ಸನ್
ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಗಿದ್ದ ಕೋರಿ ಆ್ಯಂಡರ್ಸನ್ ಕಿವೀಸ್ ಪರ 13 ಟೆಸ್ಟ್ ಪಂದ್ಯಗಳು, 49 ಏಕದಿನ ಪಂದ್ಯಗಳು ಮತ್ತು 31 ಟಿ20ಐ ಪಂದ್ಯಗಳನ್ನಾಡಿದ್ದಾರೆ. 30ರ ಹರೆಯದ ಬ್ಯಾಟಿಂಗ್ ಆಲ್ ರೌಂಡರ್ ಆಗಿರುವ ಕೋರಿ ಆ್ಯಂಡರ್ಸನ್, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರವೂ ಆಡಿದ್ದಾರೆ. ಆ್ಯಂಡರ್ಸನ್ 2020ರಲ್ಲಿ ನ್ಯೂಜಿಲೆಂಡ್ ರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮೂರು ಪ್ರಮುಖ ಲೀಗ್ ತಂಡಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು.
9. ಮಾರ್ನ್ ಮಾರ್ಕೆಲ್
ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಮಾರ್ನ್ ಮಾರ್ಕೆಲ್ ರಾಷ್ಟ್ರೀಯ ತಂಡದ ಪರ 86 ಟೆಸ್ಟ್ ಪಂದ್ಯಗಳಲ್ಲಿ 309 ವಿಕೆಟ್, 117 ಏಕದಿನ ಪಂದ್ಯಗಳಲ್ಲಿ 118 ವಿಕೆಟ್, 44 ಟಿ20ಐ ಪಂದ್ಯಗಳಲ್ಲಿ 47 ವಿಕೆಟ್ ದಾಖಲೆ ಹೊಂದಿದ್ದಾರೆ. 37ರ ಹರೆಯದ ಮಾರ್ನ್ ಮಾರ್ಕೆಲ್ 2006ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಮಾರ್ಕೆಲ್ ಆಡಿದ್ದರು. ಆಸ್ಟ್ರೇಲಿಯಾ ಮೂಲದ ಪತ್ರಕರ್ತೆಯನ್ನು ವರಿಸಿರುವ ಮಾರ್ಕೆಲ್ ಈಗ ಆಸ್ಟ್ರೇಲಿಯಾದ ಸಿಟಿಝನ್ ಶಿಪ್ ಪಡೆದುಕೊಂಡಿದ್ದಾರೆ.
8. ಸಮಿ ಅಸ್ಲಾಮ್
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದ ಸಮಿ ಅಸ್ಲಾಮ್ 2015-2018ರ ವರೆಗೆ ಆಡಿದ್ದರು. 13 ಟೆಸ್ಟ್, 4 ಏಕದಿನ ಪಂದ್ಯಗಳಲ್ಲಿ ಅಸ್ಲಾಮ್ ಪಾಕ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆ ಬಳಿಕ ಪಾಕಿಸ್ತಾನ ಕ್ರಿಕೆಟ್ ಗೆ ವಿದಾಯ ಹೇಳಿರುವ ಅಸ್ಲಾಮ್, ಯು.ಎಸ್.ಎ. ಕ್ರಿಕೆಟ್ ಗೆ ಸೇರ್ಪಡೆಗೊಂಡು ಪ್ರಮುಖ ಲೀಗ್ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
7. ಡಿವಾನ್ ಕಾನ್ವೆ
ಆರಂಭದಲ್ಲಿ ಡಿವಾನ್ ಕಾನ್ವೆ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಕ್ರಿಕೆಟ್ ನಲ್ಲಿ ನಲೆಯೂರಲು ಕಾನ್ವೆ ಪ್ರಯತ್ನಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ನಲ್ಲಿ ಕಾನ್ವೆಗೆ ಅಷ್ಟೇನೂ ಅವಕಾಶಗಳು ಸಿಗಲಿಲ್ಲ. ಹೀಗಾಗಿ ತನ್ನ ಅದೃಷ್ಟ ಹುಡುಕುತ್ತ ಹೊರಟ ಕಾನ್ವೆ ನ್ಯೂಜಿಲೆಂಡ್ ಪೌರತ್ವ ಪಡೆದು ಕಿವೀಸ್ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ವಿಕೆಟ್ ಕೀಪರ್ ಆಗಿರುವ ಕಾನ್ವೆ 3 ಟೆಸ್ಟ್ ಪಂದ್ಯಗಳಲ್ಲಿ 379 ರನ್, 3 ಏಕದಿನ ಪಂದ್ಯಗಳಲ್ಲಿ 225 ರನ್ ಮತ್ತು 20 ಟಿ20ಐ ಪಂದ್ಯಗಳಲ್ಲಿ 602 ರನ್ ಕಲೆ ಹಾಕಿದ್ದಾರೆ.
6. ಇಯಾನ್ ಮಾರ್ಗನ್
ಈಗ ಇಂಗ್ಲೆಂಡ್ ಕ್ರಿಕೆಟ್ ತಂಡದ ವೈಟ್ ಬಾಲ್ ಕ್ಯಾಪ್ಟನ್ ಆಗಿರುವ ಇಯಾನ್ ಮಾರ್ಗನ್ ಕೂಡ ಆರಂಭದಲ್ಲಿ ಆಡುತ್ತಿದ್ದುದು ಇಂಗ್ಲೆಂಡ್ ತಂಡಕ್ಕಲ್ಲ ಅನ್ನೋದು ಗೊತ್ತೆ?. ಆರಂಭದಲ್ಲಿ ಮಾರ್ಗನ್ ಐರ್ಲೆಂಡ್ ಕ್ರಿಕೆಟ್ ತಂಡದ ಪರ ಆಡುತ್ತಿದ್ದರು. ಐರ್ಲೆಂಡ್ ತಂಡದ ಪರ ಮಾರ್ಗನ್ 23 ಏಕದಿನ ಪಂದ್ಯಗಳನ್ನು ಆಡಿದ್ದರು. ಆ ಬಳಿಕ ಮಾರ್ಗನ್ ಇಂಗ್ಲೆಂಡ್ ಗೆ ಸ್ಥಳಾಂತರಗೊಂಡಿದ್ದರು. ಎಡಗೈ ಬ್ಯಾಟ್ಸ್ಮನ್ ಆಗಿರುವ 35ರ ಹರೆಯದ ಮಾರ್ಗನ್ ಇಂಗ್ಲೆಂಡ್ ತಂಡದ ಪರ 16 ಟೆಸ್ಟ್ ಪಂದ್ಯಗಳಲ್ಲಿ 700 ರನ್, 246 ಏಕದಿನ ಪಂದ್ಯಗಳಲ್ಲಿ 7701 ರನ್, 113 ಟಿ20ಐ ಪಂದ್ಯಗಳಲ್ಲಿ 2428 ರನ್ ದಾಖಲೆ ಹೊಂದಿದ್ದಾರೆ. ಸದ್ಯ ಮಾರ್ಗನ್ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನ ನಾಯಕರಾಗಿದ್ದಾರೆ.
5. ಜೋಫ್ರಾ ಆರ್ಚರ್
ವಿಶ್ವ ಕ್ರಿಕೆಟ್ ನಲ್ಲಿ ಪ್ರತಿಭಾನ್ವಿತ ವೇಗಿಗಳಲ್ಲಿ ಜೋಫ್ರಾ ಆರ್ಚರ್ ಕೂಡ ಒಬ್ಬರಾಗಿದ್ದಾರೆ. ಈಗ ಇಂಗ್ಲೆಂಡ್ ತಂಡದಲ್ಲಿರುವ ಆರ್ಚರ್ ಆರಂಭದಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಆಡುತ್ತಿದ್ದರು. ವೆಸ್ಟ್ ಇಂಡೀಸ್ ಅಂಡರ್ 19 ತಂಡದಲ್ಲಿ ಆರ್ಚರ್ ಮಿಂಚಿದ್ದರು. ಆ ಬಳಿಕ ವೃತ್ತಿಪರ ಕ್ರಿಕೆಟ್ ಕಾರಣಕ್ಕಾಗಿ ಇಂಗ್ಲೆಂಡ್ ಗೆ ಬಂದ 26ರ ಹರೆಯದ ಜೋಫ್ರಾ ಆರ್ಚರ್ 13 ಟೆಸ್ಟ್ ಪಂದ್ಯಗಳಲ್ಲಿ 42 ವಿಕೆಟ್, 17 ಏಕದಿನ ಪಂದ್ಯಗಳಲ್ಲಿ 30 ವಿಕೆಟ್, 12 ಟಿ20ಐ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ ಆರ್ಚರ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು. ಅಂದ್ಹಾಗೆ ಆರ್ಚರ್ ನಂತೆಯೇ ವೆಸ್ಟ್ ಇಂಡೀಸ್ ನ ಬೌಲಿಂಗ್ ಆಲ್ ರೌಂಡರ್ ಕ್ರಿಸ್ ಜೋರ್ಡನ್ ಕೂಡ ಇಂಗ್ಲೆಂಡ್ ಕ್ರಿಕೆಟ್ ಗೆ ಸೇರ್ಪಡೆಗೊಂಡಿದ್ದಾರೆ.
4. ಅಂಶುಮಾನ್ ರಾತ್
ಹಾಂಗ್ ಕಾಂಗ್ ಕ್ರಿಕೆಟ್ ತಂಡದಲ್ಲಿದ್ದ ಅಂಶುಮಾನ್ ರಾತ್ 2018ರ ಏಷ್ಯಾಕಪ್ ಟೂರ್ನಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು. ನಂತರ ಹಾಂಕಾಂಗ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಂಶುಮಾನ್ ಭಾರತೀಯ ಕ್ರಿಕೆಟ್ ಗೆ ಲಗ್ಗೆಯಿಟ್ಟಿದ್ದಾರೆ. ದೇಸಿ ಕ್ರಿಕೆಟ್ ನಲ್ಲಿ ಈಗ ಅಂಶುಮಾನ್ ವಿದರ್ಭ ತಂಡದ ಪರ ಆಡುತ್ತಿದ್ದಾರೆ. ವಿಕೆಟ್ ಕೀಪರ್ ಆಗಿರುವ ಅಂಶುಮಾನ್ ಅವರು ಹಾಂಕಾಂಗ್ ತಂಡದ ಪರ 18 ಏಕದಿನ ಪಂದ್ಯಗಳಲ್ಲಿ 827 ರನ್, 14 ವಿಕೆಟ್, 20 ಟಿ20ಐ ಪಂದ್ಯಗಳಲ್ಲಿ 321 ರನ್, 5 ವಿಕೆಟ್ ಗಳಿಸಿದ್ದರು.
3. ಹೇಡನ್ ವಾಲ್ಶ್
ಹೇಡನ್ ವಾಲ್ಶ್ ಅವರು ಯುಎಸ್ ವರ್ಜಿನ್ ಐಲ್ಯಾಂಡ್ ನ ಕ್ರೋಯಿಕ್ಸ್ ನಲ್ಲಿ ಜನಿಸಿದ್ದು. 29ರ ಹರೆಯದ ವಾಲ್ಶ್ ಕ್ರಿಕೆಟ್ ಲೋಕಕ್ಕೆ ಪ್ರವೇಶ ನೀಡಿದ್ದೂ ಯು.ಎಸ್.ಎ.ಯಲ್ಲೇ. ಆದರೆ ಮುಂದೆ ವಾಲ್ಶ್ ಗೆ ಯು.ಎಸ್.ಎ. ಮತ್ತು ವೆಸ್ಟ್ ಇಂಡೀಸ್ ಎರಡೂ ದೇಶಗಳ ಪೌರತ್ವ ಸಿಕ್ಕಿತು. ಆರಂಭದಲ್ಲಿ ವಾಲ್ಶ್ ಯು.ಎಸ್.ಎ. ಪರ ಜಾಗತಿಕ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಯು.ಎಸ್.ಎ. ಪರ 8 ಟಿ20ಐ ಮತ್ತು 1 ಏಕದಿನ ಪಂದ್ಯ ಆಡಿದ್ದರು. ಆ ಬಳಿಕ ಅಂದರೆ 2019ರಿಂದ ಕೆರಿಬಿಯನ್ ಕ್ರಿಕೆಟ್ ತಂಡದ ಪರ ವಾಲ್ಶ್ ಆಡಲಾರಂಭಿಸಿದರು. ಬಲಗೈ ಸ್ಪಿನ್ನರ್ ವಾಲ್ಶ್ ವೆಸ್ಟ್ ಇಂಡೀಸ್ ಪರ 13 ಏಕದಿನ ಪಂದ್ಯಗಳಲ್ಲಿ 19 ವಿಕೆಟ್, 22 ಟಿ20ಐ ಪಂದ್ಯಗಳಲ್ಲಿ 19 ವಿಕೆಟ್ ದಾಖಲೆ ಹೊಂದಿದ್ದಾರೆ.
2. ಮಾರ್ಕ್ ಚಾಪ್ಮನ್
ಬ್ಯಾಟ್ಸ್ಮನ್ ಮತ್ತು ಎಡಗೈ ಆಫ್ ಸ್ಪಿನ್ನರ್ ಆಗಿರುವ ಮಾರ್ಕ್ ಚಾಪ್ಮನ್ ಕೂಡ ಹಾಂಕಾಂಗ್ ಮತ್ತು ನ್ಯೂಜಿಲೆಂಡ್ ಎರಡೂ ದೇಶಗಳ ಪರ ವಿಶ್ವ ಕ್ರಿಕೆಟ್ ನಲ್ಲಿ ಆಡಿದ್ದಾರೆ. ಆರಂಭದಲ್ಲಿ ಅಂದರೆ 2015ರಲ್ಲಿ ಚಾಪ್ಮನ್ ಹಾಂಕಾಂಗ್ ದೇಶದ ಪರ ಆಡಿದ್ದರು. ಅನಂತರ ಇನ್ನೂ ಕ್ರಿಕೆಟ್ ನಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಚಾಪ್ಮನ್ ನ್ಯೂಜಿಲೆಂಡ್ ಪರ ಕ್ರಿಕೆಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದರು. 27ರ ಹರೆಯದ ಚಾಪ್ಮನ್ 6 ಏಕದಿನ ಪಂದ್ಯಗಳಲ್ಲಿ 161 ರನ್, 33 ಟಿ20ಐ ಪಂದ್ಯಗಳಲ್ಲಿ 619 ರನ್, 4 ವಿಕೆಟ್ ಪಡೆದಿದ್ದಾರೆ.
1. ಜುವಾನ್ ಥರಾನ್
ಜುವಾನ್ ಥರಾನ್ ಮೂಲತಃ ದಕ್ಷಿಣ ಆಫ್ರಿಕಾದವರು. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿಂದ ಜುವಾನ್ ಥರಾನ್ ದೂರ ಉಳಿಯಬೇಕಾಗಿ ಬಂತು. ಕಾರಣ ಗಾಯ ಮತ್ತು ಫಾರ್ಮ್ ಕಳೆಗುಂದಿದ್ದು. ಹೀಗಾಗಿ ಗಾಯದಿಂದ ಚೇತರಿಕೊಂಡ ಬಳಿಕ ಥರಾನ್ ರಾಷ್ಟ್ರವನ್ನು ಬದಲಾಯಿಸಿದರು. ಪ್ರೋಟಿಯಾಸ್ ಕ್ರಿಕೆಟ್ ನಿಂದ 2015ರಲ್ಲಿ ದೂರವಾದ ಜುವಾನ್ ಯು.ಎಸ್.ಎ. ಕ್ರಿಕೆಟ್ ಗೆ ಪ್ರವೇಶಿಸಿದರು. 36ರ ಹರೆಯದ ಮಧ್ಯಮ ವೇಗಿ ಜುವಾನ್ 13 ಏಕದಿನ ಪಂದ್ಯಗಳಲ್ಲಿ 23 ವಿಕೆಟ್, 9 ಟಿ20ಐ ಪಂದ್ಯಗಳಲ್ಲಿ 12 ವಿಕೆಟ್, 10 ಐಪಿಎಲ್ ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಥರಾನ್ ಅವರು ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದಾರೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು











🙏🏻
ಪ್ರತ್ಯುತ್ತರಅಳಿಸಿ