ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಇಳಿ ಸಂಜೆಯ ಸಮಯ (ಕವನ ಕಾಲಂ)

ನಾವು ತೊದಲು ನುಡಿಯುವಾಗ
ತಾಳಿ ಆಲಿಸಿದರು
ಬೆದರಿ ಬೊಬ್ಬಿಟ್ಟಿದ್ದೇ
ಅಂಗೈ ಹಿಡಿದು ಅಭಯ ಕೊಟ್ಟರು

ಎಳೆಯ ಪಾದಗಳಿಂದ ನಾವು 
ಒದ್ದು ಸಂಭ್ರಮಿಸುವಾಗ
ಅವರಿಗೂ ಪುಳಕ
ಸ್ನಿಗ್ಧ ಚರಣಗಳನ್ನೊಮ್ಮೆ
ನೇವರಿಸಿ ಮುತ್ತಿಕ್ಕಿ
ಪಟ್ಟ ಖುಷಿಗೆ ಪಾರವುಂಟೆ?

ಅಪ್ಪ ದುಡಿದು ಬಳಲಿದ್ದೆಷ್ಟು?
ಅಮ್ಮ ಸೆರಗಿನ ಗಂಟು
ಬರಿದಾಗಿ ಸೊರಗಿದ್ದೆಷ್ಟು?
ಖುಷಿಯನ್ನೆಲ್ಲಾ ಸುಟ್ಟುಕೊಂಡೇ
ಮುದಿಯರಿಬ್ಬರು ಸಲಹಿದರಲ್ಲ
ಆ ತ್ಯಾಗಕ್ಕಾವ ಹೆಸರು?

ನಾವು ಬೆಳೆದಿದ್ದೇವೆ
ಹೌದು ನಾವೀಗ ಮಾತೂ ಕಲಿತ್ತಿದ್ದೇವೆ
ಅವರ ಬಾಯಿ ಮುಚ್ಚಿಸುವ
ಮೈಗೆ ಕೈ ಎಸೆದು
ತೆಪ್ಪಗೆ ಕೂರಿಸುವ
ತಾಕತ್ತೂ ಮೈಗೂಡಿಸಿಕೊಂಡಿದ್ದೇವೆ

ಕಣ್ಣಾಗಿ ಕಾದ ಅಪ್ಪನಿಗೆ
ಕನ್ನಡಕವೂ ತಂದುಕೊಡಲಿಲ್ಲ
ಅಮ್ಮ ಹರಿದ ಸೆರಗಿನಲ್ಲೇ
ಕೊರಗುತ ಕೂತಳಲ್ಲ
ನಮ್ಮಲ್ಲಿ ಕಾಸಿಗಿಲ್ಲ ಬರಗಾಲ
ಅದೇನಿದ್ದರೂ ಮಾತಿಗೆ, ಪ್ರೀತಿಗೆ!

ಹೆಗಲಿಗೆ ಕೈಯಿಟ್ಟು
ತಬ್ಬಿನಡೆದ ಅಪ್ಪನಿಗೆ
ಕೊಟ್ಟಿದ್ದು ಊರುಗೋಲಿನಾಸರೆ
ಉಸಿರು ಕೊಟ್ಟ ಅಮ್ಮನಿಗೂ
ವೃದ್ಧಾಶ್ರಮವೆಂಬ ಬಂಧೀಖಾನೆ

ನಿಜ; ಅವರದೀಗ ಇಳಿಸಂಜೆ
ನಾಳೆ ನಮ್ಮ ಸೂರ್ಯನೂ ಮುಳುಗುತ್ತಾನೆ
ಮುಳುಗುತ್ತ ನಕ್ಕು ನುಡಿಯುತ್ತಾನೆ
'ಮಾಡಿದ್ದುಣ್ಣೋ ಮಹರಾಯ!'

-ಸದಾ ಸಕಲೇಶಪುರ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು